Greater bengaluru news9: ನಗರದಲ್ಲಿ ಕಂಡ ಸ್ಥಳದಲ್ಲೆ ಕಸ ಎಸೆಯುವವರನ್ನು ತಡೆಗಟ್ಟಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಹೊಸ ಪ್ರಯೋಗಕ್ಕೆ ಕೈಹಾಕಿದೆ. ‘ಕಸ ಸುರಿಯುವ ಹಬ್ಬ’ ಎಂಬ ಅಭಿಯಾನವನ್ನು ಪ್ರಾರಂಭಿಸಿರುವ ಬಿಎಸ್‌ಡಬ್ಲ್ಯೂಎಂಎಲ್, ಕಸ ಎಸೆಯುವವರನ್ನು ಸಾರ್ವಜನಿಕವಾಗಿ ಅವಮಾನಿಸುವ ಮೂಲಕ ಶಿಸ್ತು ತರಲು ನಿರ್ಧರಿಸಿದೆ.
ಸರ್ಕಾರದ ಸ್ಪಷ್ಟ ಸಂದೇಶದೊಂದಿಗೆ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಕಸವನ್ನು ನಿರ್ಲಕ್ಷ್ಯವಾಗಿ ಎಸೆಯುವವರ ವೀಡಿಯೊವನ್ನು ಚಿತ್ರೀಕರಿಸಿ BSWML ಗೆ ಹಂಚಿದರೆ, ಆ ವ್ಯಕ್ತಿಗೆ ₹250 ರ ಬಹುಮಾನ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
BSWML ಈಗಾಗಲೇ ನಗರದಲ್ಲಿನ 800 ಕ್ಕೂ ಹೆಚ್ಚು “ಬ್ಲಾಕ್ ಸ್ಪಾಟ್”ಗಳನ್ನು ಸ್ವಚ್ಛಗೊಳಿಸಿದರೂ, ಜನರು ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುತ್ತಿರುವುದು ಕಂಡುಬಂದಿದೆ. “ಮನೆ ಬಾಗಿಲಿಗೆ ಬರುವ ಆಟೋ ಟಿಪ್ಪರ್‌ಗಳಿಗೆ ಕಸ ನೀಡಲು ಜನರು ಸೋಮಾರಿತನ ತೋರಿಸುತ್ತಿದ್ದಾರೆ. ಅದಕ್ಕಾಗಿ ಈ ಕ್ರಮ ತೆಗೆದುಕೊಂಡಿದ್ದೇವೆ,” ಎಂದು BSWML ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಹೇಳಿದರು.
ನಾಗರಿಕರು ಕಸ ಎಸೆಯುವವರ ವೀಡಿಯೊವನ್ನು BSWML ನ WhatsApp ಸಂಖ್ಯೆ 94481 97197 ಗೆ ಕಳುಹಿಸಬಹುದು. ವೀಡಿಯೊದೊಂದಿಗೆ ಸ್ಥಳದ ವಿವರ ಹಾಗೂ ಸಾಧ್ಯವಾದರೆ ಉಲ್ಲಂಘನೆಯ ವ್ಯಕ್ತಿಯ ಮಾಹಿತಿ ನೀಡಬೇಕು.
ಸರ್ಕಾರದ ಅನುಮೋದನೆಯೊಂದಿಗೆ, ಕಸ ಎಸೆಯುವವರ ಮನೆ ಬಾಗಿಲಿಗೆ ತ್ಯಾಜ್ಯ ಸುರಿಯುವಂತಹ ದಿಟ್ಟ ಕ್ರಮಗಳನ್ನೂ ಬಿಎಸ್‌ಡಬ್ಲ್ಯೂಎಂಎಲ್ ಕೈಗೊಳ್ಳುತ್ತಿದೆ. ವೀಡಿಯೊ ಕಳುಹಿಸುವವರ ಗುರುತನ್ನು ಸಂಪೂರ್ಣ ರಹಸ್ಯವಾಗಿಡಲಾಗುವುದು ಎಂದು GBA ನ ಐಟಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


