Greater Bengaluru News9 : ರಾಜ್ಯ ರಾಜ್ಯಕಾರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೇ ಸದ್ದು ಮಾಡುತ್ತಿದೆ. ತಮ್ಮ ತಂದೆ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತಾಗಿ ಯತೀಂದ್ರ ಹೇಳಿದ ಮಾತು ಇದೀಗ ಬಹುಚರ್ಚಿತ ವಿಚಾರವಾಗಿದೆ. ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಢೀರ್ ದೆಹಲಿಗೆ ಹಾರಿದ್ದಾರೆ. ಡಿಕೆಶಿಯ ದೆಹಲಿ ಪ್ರವಾಸ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಡಿಕೆಶಿ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಲು ಸಮಯ ಕೇಳಿದ್ದಾರೆ. ರಾಹುಲ್ ಗಾಂಧಿ ಭೇಟಿಗೆ ಅವಕಾಶ ದೊರೆತರೆ, ರಾಜ್ಯ ರಾಜಕಾರಣ ಹಾಗೂ ಅಧಿಕಾರ ಹಂಚಿಕೆ (ಪವರ್ ಶೇರಿಂಗ್) ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಡಿಕೆಶಿ ಈಗ ಅಗ್ರೇಸಿವ್ ಮೋಡ್ನಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಹಿಂದೆ ಹೈಕಮಾಂಡ್ಗೆ ನೀಡಿದ್ದ ಭರವಸೆಗಳನ್ನು ಕಾರ್ಯರೂಪಕ್ಕೆ ತರಲು ಒತ್ತಾಯ ಮಾಡುವ ಸಾಧ್ಯತೆಗಳಿವೆ.
ಕೆಲ ಶಾಸಕರು ಹಾಗೂ ಮಂತ್ರಿಗಳು ಪವರ್ ಶೇರಿಂಗ್ ವಿಚಾರದಲ್ಲಿ ಅಪಸ್ವರ ಎತ್ತಿರುವ ಹಿನ್ನೆಲೆಯಲ್ಲಿ, ಆ ಅಪಸ್ವರಕ್ಕೆ ಬ್ರೇಕ್ ಹಾಕಲು ಡಿಕೆಶಿ ರಾಹುಲ್ ಗಾಂಧಿಗೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆ, ಆಶಾ ಕಾರ್ಯಕರ್ತೆಯರು ಸಂಘಟನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ಅದಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಡಿಕೆಶಿ ದೆಹಲಿಗೆ ತೆರಳಿದ್ದಾರೆ.
ಅದೇ ರೀತಿ, ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ರಾಹುಲ್ ಗಾಂಧಿಗೆ ಆಹ್ವಾನ ನೀಡುವ ಯೋಜನೆ ಇದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ರಾಹುಲ್ ಗಾಂಧಿ ನವೆಂಬರ್ 17ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ವ್ಯಕ್ತವಾಗಿದೆ.


