BBMP
Loading ...

E Khata

Greater Bengaluru News9: ಬಹುದಿನಗಳಿಂದ ಲಕ್ಷಾಂತರ ಜನರು ನಿರೀಕ್ಷೆಯಲ್ಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆವಿನ್ಯೂ ಸೈಟ್ ಅಥವಾ ಕಟ್ಟಡಗಳಿಗೆ ಇ-ಖಾತಾ ನೀಡಲು ರಾಜ್ಯ ಸರ್ಕಾರ ಅಧಿಸೂಚನೆ ಅಂತಿಮಗೊಳಿಸಿದೆ.

ರಾಜ್ಯದಲ್ಲಿ ಬಿಡಿಎ, ಕೆಎಚ್‌ಬಿ, ಕೆಐಎಡಿಬಿ ಸೇರಿದಂತೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಇಲ್ಲದೆ ಮತ್ತು ಭೂ ಪರಿವರ್ತನೆ ಇಲ್ಲದೆ ಕೃಷಿ ಭೂಮಿಯಲ್ಲಿ ಬಡಾವಣೆ ಮಾಡಿ ರೆವಿನ್ಯೂ ಸೈಟ್/ ಕಂದಾಯ ಸೈಟ್ ಗಳನ್ನು ಮಾರಾಟ ಮಾಡಲಾಗಿತ್ತು. ಇಂಥಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುತ್ತಿರುವ ಲಕ್ಷಾಂತರ ಆಸ್ತಿಗಳು ರಾಜ್ಯದಲ್ಲಿವೆ. ಅಲ್ಲದೆ, ಬಹುತೇಕ ಕಡೆಗಳಲ್ಲಿ ಗ್ರಾಮ ಪಂಚಾಯಿತಿಯಿಂದ ನೀರು, ವಿದ್ಯುತ್, ರಸ್ತೆ ಸಂಪರ್ಕ ಸಹ ಕಲ್ಪಿಸಿ ತೆರಿಗೆ ಸಂಗ್ರಹ ಮಾಡುತ್ತಿದ್ದರೂ ಖಾತಾ ನೀಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ಗ್ರಾಮ ಪಂಚಾಯಿತಿಯಿಂದ ನಮೂನೆ-9, 9ಎ ಮತ್ತು 11ಎ ವಿತರಿಸಿ ತೆರಿಗೆ ಸಂಗ್ರಹಿಸಲಾಗುತ್ತಿತ್ತು.

2024ರ ಅಕ್ಟೋಬರ್‌ನಲ್ಲಿ ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮರೆವಿನ್ಯೂ ಸೈಟ್‌ಗಳ ವ್ಯವಹಾರ ಸಂಪೂರ್ಣ ಸ್ಥಗಿತವಾಗಿದೆ. ಇತ್ತ ಮಹಾನಗರ ಮತ್ತು ನಗರ, ಪಟ್ಟಣಗಳಲ್ಲಿ ಎಲ್ಲ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ಅದೇ ರೀತಿಯಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆವಿನ್ಯೂ ಸೈಟ್ಗಳಿಗೆ ಇ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾಯ್ದೆಗೆ ತಿದ್ದುಪಡಿ ತಂದು ಇದೀಗ ಎಲ್ಲ ಆಸ್ತಿಗಳಿಗೆ ತಂತ್ರಾಂಶದಲ್ಲಿ ದಾಖಲಿಸಿ ನಮೂನೆ-11ಎ (ಇ-ಖಾತಾ) ನೀಡಲು ಅಂತಿಮ ಅಧಿಸೂಚನೆ ಸಿದ್ಧಪಡಿಸಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.

ಅಂದರೆ ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಿಸುತ್ತಿದ್ದ ನಮೂನೆ-9, 9ಎ ಮತ್ತು 11ಎ ಗಳಲ್ಲಿ ಆಸ್ತಿಗಳನ್ನು ಇನ್ನು ಮುಂದೆ ನಮೂನೆ-11ಎ ರಿಜಿಸ್ಟರ್‌ನಲ್ಲಿ ಸೇರಿಸಿ ನಿರ್ವಹಿಸಬೇಕು. ಅಂತಹ ಆಸ್ತಿಗಳನ್ನು ಸೇರಿಸುವುದಕ್ಕೆ ಮೊದಲು ನಿಗದಿತ ದಾಖಲೆ ಪಡೆದು 15 ದಿನಗಳ ಒಳಗಾಗಿ ತಂತ್ರಾಂಶದಲ್ಲಿ ದಾಖಲಿಸಿ ನಮೂನೆ 11ಎ ವಿತರಿಸಬೇಕೆಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕಾರ ಗ್ರಾಮ ಠಾಣಾ, ಸರ್ಕಾರದ ವಸತಿ ನಿಗಮದ ಯೋಜನೆಯಡಿ ಮಂಜೂರಾದ ಆಸ್ತಿ, 1992ರ ನವೆಂಬರ್ 16 ರಿಂದ 2014ರ ನವೆಂಬರ್ 11ರ ಅವಧಿಯಲ್ಲಿ ಮತ್ತು 1992ರ ನ.16ರ ಪೂರ್ವದಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿ ಮಂಡಲ/ಗ್ರಾಮ ಪಂಚಾಯಿತಿ ವಿನ್ಯಾಸ ಅನುಮೋದಿತ ಆಸ್ತಿಗಳಿಗೆ ಇ-ಖಾತಾ ಸಿಗಲಿದೆ. ಜತೆಗೆ ಕೆಐಎಡಿಬಿ, ಕೈಗಾರಿಕಾ ವಿನ್ಯಾಸ ಅನುಮೋದಿತ ಆಸ್ತಿಗಳು, 2013ರ ಜೂನ್ 14ರ ಪೂರ್ವದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪತ್ರ ಕಟ್ಟಡ ನಕ್ಷೆಯನ್ವಯ ನಿರ್ಮಿತ ಆಸ್ತಿಗಳು, ಭೂ ಕಂದಾಯ ಅಧಿನಿಯಮ 1964ರ ಪ್ರಕರಣ 94ಎ, 94ಸಿಸಿ/94ಡಿ ಅನ್ವಯ ಮಂಜೂರಾದ ಆಸ್ತಿಗಳು, ಪುನರ್ವಸತಿ ಯೋಜನೆಯ ಆಸ್ತಿಗಳು ಹಾಗೂ ನೋಂದಾಯಿತ ಪಾಲುದಾರಿಕೆ ಪತ್ರದಂತೆ ಪೋಡಿ/ಹಿಸ್ಸಾ ನಂಬರ್ ಪಡೆದ ವೈಯಕ್ತಿಕ ಕುಟುಂಬದ ಆಸ್ತಿ(ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ)ಗಳಿಗೆ ಇ-ಖಾತಾ ನೀಡಲು ಇಲಾಖೆ ಮುಂದಾಗಿದೆ.

ಗ್ರಾಮ ಪಂಚಾಯಿತಿ ಗ್ರೇಡ್-1/ಗ್ರೇಡ್-2 ಕಾರ್ಯದರ್ಶಿಗಳು ಅರ್ಜಿಯನ್ನು ಸ್ವೀಕರಿಸಿದ ನಂತರ ಸ್ಥಳ ಪರಿಶೀಲನೆ ಕೈಗೊಂಡು 4 ಕರ್ತವ್ಯದ ದಿನಗಳಲ್ಲಿ ಪೂರ್ಣ ದಾಖಲೆಗಳನ್ನು ಪರಿಶೀಲನೆ ನಡೆಸಬೇಕು. ತಂತ್ರಾಂಶದಲ್ಲಿ ಮಾಹಿತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಬೇಕು. ಅವರು ಎರಡು ದಿನಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅನುಮೋದನೆಗೆ ಸಲ್ಲಿಸಿ ಅವರಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ ನಂತರ 4 ಕೆಲಸದ ದಿನಗಳ ಒಳಗಾಗಿ ತೀರ್ಮಾನ ತೆಗೆದುಕೊಳ್ಳಬೇಕು. ನಿಗದಿತ ದಾಖಲೆ ಸಲ್ಲಿಸಿದ್ದರೆ 15 ದಿನಗಳ ಒಳಗಾಗಿ ಡಿಜಿಟಲ್ ಸಹಿ ಮಾಡಿ ಇ-ಖಾತಾ ನೀಡಬೇಕೆಂದು ಅಧಿಸೂಚನೆಯಲ್ಲಿ ಕಾನೂನು ರೂಪಿಸಲಾಗಿದೆ.

ಇ-ಖಾತಾ ಪಡೆಯಲು ಅಗತ್ಯ ದಾಖಲೆ

  • ಕಟ್ಟಡ ನಿಯಮ ಉಲ್ಲಂಘಿಸಿ ಕೃಷಿ ಜಮೀನಿನಲ್ಲಿ ಅಥವಾ ಭೂ ಪರಿವರ್ತಿತ ಭೂಮಿಯಲ್ಲಿನ ಕಟ್ಟಡಗಳಿಗೆ ಇ-ಖಾತಾ ಪಡೆಯಲು ನೋಂದಾಯಿತ ಪ್ರಮಾಣ ಪತ್ರ/ತೆರಿಗೆ ಪಾವತಿ ರಶೀದಿ (2025ರ ಏಪ್ರಿಲ್ 7 ಪೂರ್ವದ್ದು), ವಿದ್ಯುತ್ ಬಿಲ್ (2025ರ ಏ.7 ಪೂರ್ವದ್ದು), ಪಹಣಿ, ಋಣಭಾರ ಪ್ರಮಾಣ ಪತ್ರ(ಇಸಿ) ಕಡ್ಡಾಯವಾಗಿದೆ. ಭೂ ಪರಿವರ್ತನೆ ಆದೇಶ ಐಚ್ಛಿಕವಾಗಿದೆ.
  • ಪರಿವರ್ತನೆ ಇಲ್ಲದ/ ಕೃಷಿ ಜಮೀನಿನ ನಿವೇಶನಗಳಿಗೆ ನೋಂದಾಯಿತ ಪ್ರಮಾಣ ಪತ್ರ, ಪಹಣಿ, ಋಣಭಾರ ಪ್ರಮಾಣ ಪತ್ರ(ಇಸಿ) ಕಡ್ಡಾಯ. ಭೂ ಪರಿವರ್ತನೆ ಆದೇಶ ಐಚ್ಛಿಕ.
  • ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದು ಮಾದರಿ ಕಟ್ಟಡ ನಿಯಮ ಉಲ್ಲಂಘನೆ ಮಾಡಿರುವ ಆಸ್ತಿಗೆ ನೋಂದಾಯಿತ ಪ್ರಮಾಣ ಪತ್ರ, ಭೂ ಪರಿವರ್ತನೆ ಆದೇಶ, ಬಡಾವಣೆ ವಿನ್ಯಾಸ, ನಿವೇಶನ ಬಿಡುಗಡೆ ಆದೇಶ, ಋಣಭಾರ ಪ್ರಮಾಣ ಪತ್ರ (ಇಸಿ) ಕಡ್ಡಾಯ
  • ಲೇಔಟ್ ಪ್ಲಾನ್ ಇಲ್ಲದೆ ಮೂಲಭೂತ ಸೌಕರ್ಯ ಒದಗಿಸಿ, ಪಾರ್ಕ್, ಸಿಎ ಸೈಟ್, ರಸ್ತೆಯನ್ನು ಗ್ರಾಮ ಪಂಚಾಯಿತಿಗೆ ಪರಿತ್ಯಾಜನಾ ಪತ್ರ ಮೂಲಕ ವರ್ಗಾಯಿಸಿರುವ ಕಂದಾಯ ಭೂಮಿ ನಿವೇಶನಗಳಿಗೆ ಪಹಣಿ, ನೋಂದಾಯಿತ ಪರಿತ್ಯಾಜನ ಪತ್ರ, ಭೂ ಪರಿವರ್ತಿತ ಆದೇಶ, ಇಸಿ ಕಡ್ಡಾಯ.
  • ಭೂ ಪರಿವರ್ತಿತ/ಭಾವಿತ ಭೂ ಪರಿವರ್ತಿತ ಜಮೀನುಗಳು(ಏಕ ನಿವೇಶನ/ಉಂಡೆ ಖಾತಾ) ಭೂ ಪರಿವರ್ತನೆ ಆದೇಶ/ಮಂಜೂರಾತಿ ಆದೇಶ ಕಡ್ಡಾಯ.

Leave a Reply

Your email address will not be published. Required fields are marked *