Greater Bengaluru News9: ಮತ್ತೆ ಪವರ್ ಶೇರಿಂಗ್ ವಿಚಾರ ಕಾಂಗ್ರೆಸ್ ವಲಯದಲ್ಲಿ ಕಿಚ್ಚು ಹಚ್ಚಿದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎನ್ನುವ ಆಪ್ತರ ಕೂಗು ಹೆಚ್ಚುತ್ತಿದ್ದಂತೆ ಹೈಕಮಾಂಡ್ಗೆ ಮತ್ತೆ ತಲೆ ಬಿಸಿ ಆಗಿದೆ. ಸೆಪ್ಟೆಂಬರ್ ಕ್ರಾಂತಿ ಸುಳ್ಳಾಯ್ತು, ನವೆಂಬರ್ ಕ್ರಾಂತಿ ನಿಜವಾಗುತ್ತಾ ಎನ್ನುವ ಚರ್ಚೆ ಜೋರಾಗಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ಭೇಟಿಗೆ ತೆರಳಿದ್ರಾ ಡಿಸಿಎಂ?
ಡಿಸಿಎಂ ಬಣ ಗುದ್ದಾಟ
ಕಾಂಗ್ರೆಸ್ನಲ್ಲಿ ಸಿಎಂ v/s ಡಿಸಿಎಂ ಬಣಗಳು ಹುಟ್ಟಿಕೊಂಡಿದೆ ಎನ್ನುವ ಮಾತು ಕೇಳಿ ಬರ್ತಿದೆ. ಡಿಕೆ ಶಿವಕುಮಾರ್ ಆಪ್ತರು ಬಹಿರಂಗವಾಗಿಯೇ ಡಿಕೆಶಿ ಸಿಎಂ ಆಗೇ ಆಗ್ತಾರೆ ಎಂದು ಹೇಳಿಕೆಗಳನ್ನ ಕೊಡ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಆಪ್ತರು ಕೂಡ ನಾವೇನು ಕಡಿಮೆ ಇಲ್ಲ ಅಂತ ಸಿದ್ದರಾಮಯ್ಯ ಅವರೇ 5 ವರ್ಷವೂ ಸಿಎಂ ಅಂತಿದ್ದಾರೆ.
ದಿಢೀರ್ ಡೆಲ್ಲಿಗೆ ತೆರಳಿದ ಡಿಕೆಶಿ
ಅತ್ತ ನಾನೇ ಪೂರ್ಣಾವಧಿ ಸಿಎಂ ಎಂದು ಸಿದ್ದರಾಮಯ್ಯ ಕೂಗಿ ಕೂಗಿ ಹೇಳ್ತಿದ್ರೆ, ಇತ್ತ ಡಿಕೆಶಿ ಕುರ್ಚಿ ಕಸಿದುಕೊಳ್ಳಲು ನಾನಾ ಸರ್ಕಸ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಡಿಸಿಎಂ ಬೆಳಿಗ್ಗೆ 10.30ಕ್ಕೆ ದೆಹಲಿಗೆ ತೆರಳಿದ್ದು, ಹೈಕಮಾಂಡ್ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇತ್ತೀಚಿಗಷ್ಟೇ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವ್ರು ರಾಜ್ಯಕ್ಕೆ ಆಗಮಿಸಿದ್ರು. ಕೆಲ ನಾಯಕರ ಜೊತೆ ಚರ್ಚೆ ನಡೆಸಿದ್ರು. ಈ ವೇಳೆ ಡಿಕೆ ಶಿವಕುಮಾರ್ ಅವ್ರು ಸುರ್ಜೇವಾಲಾ ಬಳಿಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು ಎನ್ನಲಾಗ್ತಿದೆ.
ಹೈಕಮಾಂಡ್ ನಾಯಕರ ಭೇಟಿಯಾಗ್ತಾರಾ?
ಹೈಕಮಾಂಡ್ ನಾಯಕರ ಭೇಟಿಗೆ ಮುಂದಾದ್ರ ಡಿಸಿಎಂ ಎನ್ನುವ ಮಾತುಗಳು ಕೇಳಿ ಬರ್ತಿದೆ. ಆದ್ರೆ ಡಿಕೆಶಿ ಆಪ್ತರು ಮಾತ್ರ ಡಿಸಿಎಂ ದೆಹಲಿಗೆ ತೆರಳಿರೋದು ಹೈಕಮಾಂಡ್ ನಾಯಕರ ಭೇಟಿಗಲ್ಲ ಸುಪ್ರೀಂ ಕೋರ್ಟ್ ಹಿರಿಯ ವಕೀಲರನ್ನ ಭೇಟಿ ಮಾಡಲು ಅಂತಿದ್ದಾರೆ.
ಮತ್ತೆ ಪವರ್ ಶೇರಿಂಗ್ ಚರ್ಚೆ
ರಾಜ್ಯದಲ್ಲಿ ಮತ್ತೆ ಪವರ್ ಶೇರಿಂಗ್ ವಿಚಾರ ಸದ್ದು ಮಾಡ್ತಿದ್ದು, ಇದೇ ವೇಳೆ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಲಿದೆ. ಆದ್ರೆ ಇತ್ತ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಸಿಎಂ ಆಪ್ತರು ಹೇಳಿಕೆ ನೀಡ್ತಿದ್ದಾರೆ. ಡಿಕೆ ಶಿವಕುಮಾರ್ ಅವ್ರು ಪ್ರಿಯಾಂಕಾ ಗಾಂಧಿ ಅಥವಾ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.


