Greater Bengaluru News9 : ”ಸಿದ್ದರಾಮಯ್ಯನವರು ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವು ಕೇಳುತ್ತೇವೆ ಅಂತ ಅಂದಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಸಾಕಷ್ಟು ವಿಚಾರ ಮಾತಾಡಬೇಕು. ದಸರಾ ಮುಗಿದ ಮೇಲೆ ಮಾತನಾಡುತ್ತೇನೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ” ಎಂದರು.
”ಸುಮಾರು 600-700 ನಿಗಮ, ಮಂಡಳಿಗಳ ನಿರ್ದೇಶಕರ ಪಟ್ಟಿ ಸಿದ್ದವಿದೆ. ಆ ಬಗ್ಗೆ ನಾನು, ಸಿಎಂ ಚರ್ಚೆ ನಡೆಸಿ ಎರಡು ಮೂರು ದಿನಗಳಲ್ಲಿ ತೀರ್ಮಾನಿಸಿ ಘೋಷಣೆ ಮಾಡುತ್ತೇವೆ. ನಿಗಮ, ಮಂಡಳಿ ಅಧ್ಯಕ್ಷರು ಎರಡು ವರ್ಷ ಆದ ಬಳಿಕ ರಾಜೀನಾಮೆ ನೀಡಬೇಕು. ನಾವು ಎಲ್ಲರೂ ಅಧಿಕಾರವನ್ನು ಹಂಚಬೇಕಾಗುತ್ತದೆ. ನಾವು ಶೇರಿಂಗ್ ಅಂಡ್ ಕೇರಿಂಗ್ನಲ್ಲಿರಬೇಕು. ನಾನು ಮಾತನಾಡಿದ್ದು ಬೋರ್ಡ್ ಅಧ್ಯಕ್ಷರು, ಡೈರೆಕ್ಟರ್ಗಳ ಅಧಿಕಾರ ಹಂಚಿಕೆ ಬಗ್ಗೆ ಮಾತ್ರ” ಎಂದು ಸ್ಪಷ್ಟಪಡಿಸಿದರು.
ಯಾರೇ ಮಾತನಾಡಿದರೂ ನೋಟಿಸ್: ”ಸರ್ಕಾರದ ಅಧಿಕಾರ ಹಂಚಿಕೆ ಬಗ್ಗೆ ನಾನು ಮಾತನಾಡಿಲ್ಲ. ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಸಿದ್ದರಾಮಯ್ಯ ಅವರು ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವು ಕೇಳುತ್ತೇವೆ ಅಂತ ಅಂದಿದ್ದಾರೆ. ಅಷ್ಟಕ್ಕೆ ನಾವು ಸೀಮಿತವಾಗಿರೋಣ. ಹೀಗಾಗಿ ಅಧಿಕಾರ ಹಂಚಿಕೆ ಬಗ್ಗೆ ಯಾರೇ ಮಾತಾಡಿದರೂ ನೋಟಿಸ್ ಕೊಡಲು ಹೇಳಿದ್ದೇನೆ. ಶಿವರಾಮೇಗೌಡಗೂ ನೋಟಿಸ್ ಕೊಡಿ. ರಂಗನಾಥ್ಗೂ ನೋಟಿಸ್ ಕೊಡಿ ಅಂತ ಹೇಳಿದ್ದೇನೆ” ಎಂದು ತಿಳಿಸಿದರು.
ಕಾಂಗ್ರೆಸ್ ಇಲ್ಲದೇ ಆಶ್ರಯ ಇಲ್ಲ: ‘‘ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧಿ. ಇಂದು ವನ್ಯಜೀವಿಗಳಿಗೆ ಪ್ರೋತ್ಸಾಹದ ದಿನ. ಅದನ್ನು ಉದ್ಘಾಟನೆ ಮಾಡಿದ್ದೇನೆ. ವಾಕ್ ಸಹ ಮಾಡಿ ಬಂದಿದ್ದೇನೆ. ಯಾವತ್ತೂ ಸುಸ್ತು ಆಗಿರಲಿಲ್ಲ, ಇವತ್ತು ಸುಸ್ತು ಆಯಿತು. ಗಾಂಧಿ ಅಂದರೆ ಅದೊಂದು ಶಕ್ತಿ. ಗಾಂಧಿಯವರ ಜನ್ಮದಿನಾಚರಣೆ ನಡೆಯುತ್ತಿದೆ. ಈ ವರ್ಷ ಗಾಂಧಿ ಭಾರತಕ್ಕೂ ನೂರು ವರ್ಷ ಆಗಿದೆ. ಇಡೀ ವರ್ಷ ಸಂಘಟನೆಯ ವರ್ಷ ಮಾಡುತ್ತಿದ್ದೇವೆ. ಬಿಜೆಪಿಗೆ, ಗಾಂಧಿಯವರಿಗೆ ಸಂಬಂಧ ಇಲ್ಲ. ಕಾಂಗ್ರೆಸ್ ಇಲ್ಲದೇ ಆಶ್ರಯ ಇಲ್ಲ. ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮ ಬದಲಾವಣೆ ಮಾಡಿಲ್ಲ” ಎಂದರು.
ನಮ್ಮ ಗ್ಯಾರಂಟಿ ಕಾಪಿ ಮಾಡಿದ್ದಾರೆ: ”ನೆಲ್ಸನ್ ಮಂಡೇಲಾ, ಬರಾಕ್ ಒಬಾಮ ಅವರು ಗಾಂಧಿಯವರನ್ನು ಹಾಡಿ ಹೊಗಳಿದ್ದಾರೆ. ಇಂದು ಗಾಂಧೀಜಿಯವರನ್ನು ಸ್ಮರಿಸೋಣ. ನಾವು ಶಾಂತಿ, ಸಹಬಾಳ್ವೆಯಿಂದ ಬದುಕಬೇಕು. ಗಾಂಧಿ ಬಗ್ಗೆ ಪುಸ್ತಕದಲ್ಲಿ ಮಾತ್ರ ಓದಬಾರದು. ವ್ಯಕ್ತಿ ಮರಣ ಆಗಿರಬಹುದು. ಆದರೆ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮನ್ನು ನೀವು ನಿಯಂತ್ರಿಸಬೇಕು. ಅದು ಆಗಬೇಕಾದರೆ ಮೆದುಳು ಉಪಯೋಗಿಸಬೇಕು ಎಂದು ಗಾಂಧೀಜಿ ಅವರು ಹೇಳಿದ್ದರು. ಈ ದೇಶಕ್ಕೆ ನಾವೇ ಮೂಲ. ಗ್ಯಾರಂಟಿ ಯೋಜನೆಗಳನ್ನು ಸಹ ನಾವು ಜಾರಿ ಮಾಡಿದ್ದೇವೆ. ಬಿಸಿಯೂಟ, ಆಧಾರ್ ಸೇರಿ ಅನೇಕ ಯೋಜನೆಗಳನ್ನು ತಂದಿದ್ದೇವೆ. ಆದರೆ, ಇವತ್ತು ಬಿಜೆಪಿಯವರು ನಮ್ಮ ಗ್ಯಾರಂಟಿ ಕಾಪಿ ಮಾಡಿದ್ದಾರೆ” ಎಂದು ಟೀಕಿಸಿದರು.


