Greater Bengaluru News9 : ರಾಜ್ಯದ ರಾಜಧಾನಿಯಾದ ಬೆಂಗಳೂರು, ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ದೇಶದ ಇತರ ಎಲ್ಲ ಮೆಟ್ರೋ ನಗರಗಳನ್ನು ಮೀರಿಸಿ ಅಗ್ರಸ್ಥಾನ ಪಡೆದಿದೆ. ಈ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2023ರ ವರದಿಯಲ್ಲಿ ತಿಳಿಸಲಾಗಿದೆ.
ಈ ವರದಿ ಪ್ರಕಾರ, ಕಳೆದ ವರ್ಷ ಬೆಂಗಳೂರು ನಗರದಲ್ಲಿ ಒಟ್ಟು 1,013 ವರದಕ್ಷಿಣೆ ಸಂಬಂಧಿತ ದೂರುಗಳು ದಾಖಲಾಗಿವೆ. ಇದು ದೇಶದ ಇತರ 18 ಮೆಟ್ರೋ ನಗರಗಳಿಗಿಂತಲೂ ಹೆಚ್ಚು. ಪಾಟ್ನಾದಲ್ಲಿ 104, ಲಕ್ನೋನಲ್ಲಿ ಕೇವಲ 19 ಪ್ರಕರಣಗಳು ಮಾತ್ರ ದಾಖಲಾಗಿವೆ.
ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪಾಟ್ನಾದಲ್ಲಿ 104 ಪ್ರಕರಣಗಳು ದಾಖಲಾದರೆ, ಲಕ್ನೋನಲ್ಲಿ ಕೇವಲ 19 ಪ್ರಕರಣಗಳು ದಾಖಲಾಗಿರುವುದು ವರದಿ ಆಗಿದೆ. ಆದರೆ ಬೆಂಗಳೂರಿನಲ್ಲಿ ಸಾವಿರಾರು ದೂರುಗಳು ದಾಖಲಾಗಿದೆ. ಹಾಗಂತ ಅಪರಾಧಗಳು ನಡೆಯುತ್ತಿವೆ ಎಂದು ಅರ್ಥವಲ್ಲ, ಬದಲಿಗೆ ಹೆಚ್ಚಿನ ಮಹಿಳೆಯರು ತಮಗಾದ ದೌರ್ಜನ್ಯದ ಬಗ್ಗೆ ದೂರು ನೀಡಲು ಮುಂದೆ ಬರುತ್ತಿದ್ದಾರೆ ಎಂಬುವುದನ್ನು ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಅದರೊಂದಿಗೆ, NCRB ನೀಡಿರುವ ವರದಿಯ ಪ್ರಕಾರ 2023ರಲ್ಲಿ ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಶೇಕಡಾ 14 ರಷ್ಟು ಹೆಚ್ಚಾಗಿವೆ. ಬೆಂಗಳೂರು ನಗರದ ಮಟ್ಟದಲ್ಲಿ ನೋಡಿದರೆ, ಮಹಿಳೆಯರ ಮೇಲಿನ ಅಪರಾಧಗಳು ಶೇಕಡಾ 24ರಷ್ಟು, ಹಿಂಸಾಚಾರ, ಕೊಲೆ, ಅಪಹರಣ, ಹಿರಿಯ ನಾಗರಿಕರ ಮೇಲಿನ ಹಲ್ಲೆ ಪ್ರಕರಣಗಳು ಕೂಡ ಹೆಚ್ಚಾಗಿವೆ.
ಇದೇ ವರದಿಯಲ್ಲಿ, ರಾಜ್ಯದಲ್ಲಿ ರಸ್ತೆ ಅಪಘಾತದ ಪ್ರಕರಣಗಳೂ ಅಧಿಕ ಸಂಖ್ಯೆಯಲ್ಲಿ ದಾಖಲಾಗಿದ್ದು, 12,322 ಮಂದಿ ಸಾವಿಗೀಡಾಗಿದ್ದಾರೆ. ಅದೇ ರೀತಿ 13,000ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಕಳವಳ ಹುಟ್ಟಿಸಿದೆ.


