Greater Bengaluru News9 : ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ(PSI) ಜಗದೇವಿಗೆ ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಈ ಹಿಂದೆ ದೇವನಹಳ್ಳಿ ಠಾಣೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಠಾಣೆಯ ಪಿಸಿ ಅಂಬರೀಶ್ ಅಡ್ವಾನ್ಸ್ 25 ಸಾವಿರ ಪಡೆದುಕೊಂಡು ಉಳಿದ 75 ಸಾವಿರ ಲಂಚ ಪಡೆಯುವ ವೇಳೆ ಪಿಸಿ ಅಂಬರೀಶ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದ. ಹೀಗಾಗಿ ಪಿಸಿ ಅಂಬರೀಶ್ ಗೆ ಹಣ ಪಡೆಯಲು ಸೂಚಿಸಿದ್ದ ಪಿಎಸ್‌ಐ ಜಗದೇವಿ, ಎಸ್ಕೇಪ್ ಆಗಿದ್ದರು.
ಛೀಮಾರಿ ಹಾಕಿದ ಕೋರ್ಟ್..!
ಎ1 ಆರೋಪಿ ಪಿಎಸ್‌ಐ ಜಗದೇವಿ ಹಾಗೂ ಎ2 ಆರೋಪಿ ಮಂಜುನಾಥ್, ಎ3 ಅಂಬರೀಶ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಇಬ್ಬರು ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಪಿಎಸ್‌ಐ ಜಗದೇವಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆ.27ರಂದು ವಜಾಗೊಳಿಸಿ ಲೋಕಾಯುಕ್ತ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಆದೇಶ ಹೊರಡಿಸಿದ್ದು, ಪೋಕ್ಸೊ ಪ್ರಕರಣದಂತಹ ಸೂಕ್ಷ್ಮ ಪ್ರಕರಣದ ತನಿಖೆ ನಡೆಸಲು ಸಂತ್ರಸ್ತೆಯ ತಾಯಿಯಿಂದ ಲಂಚ ಪಡೆದು ಪುನಃ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಿ ಪಿಎಸ್‌ಐ ನಡೆ ಅತ್ಯಂತ ಅಮಾನವೀಯ ಹಾಗೂ ಕ್ಷಮಿಸಲು ಸಾಧ್ಯವಾಗದ ಕೃತ್ಯವಾಗಿದೆ. ಸರಕಾರಿ ಅಧಿಕಾರಿಯ ಈ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಛೀಮಾರಿ ಹಾಕಿದ್ದಾರೆ. ಸಂತ್ರಸ್ತೆಯ ತಾಯಿಯಿಂದ ಲಂಚ ಪಡೆದ ಪಿಎಸ್‌ಐ ನಡೆ ಅಮಾನವೀಯ, ಎಂದು ಆರೋಪಿ ಕರೆತರಲು ಹಣ ಕೇಳಿದ್ದ ಪಿಎಸ್‌ಐ ನಡೆಯ ಬಗ್ಗೆ ನ್ಯಾಯಾಲಯ ಕಟುವಾಗಿ ಟೀಕಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿನ ಅಪರಾಧಗಳು ಸಂತ್ರಸ್ತರ ಮೇಲೆ ಮಾತ್ರವಲ್ಲದೆ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ. ಈ ಭ್ರಷ್ಟಾಚಾರದ ಪಿಡುಗು ಸಾಮಾನ್ಯ ಜನರ ಜೀವನದ ಜೊತೆ ಆಟವಾಡುತ್ತಿದೆ ಮತ್ತು ನಮ್ಮಂತಹ ಬೆಳೆಯುತ್ತಿರುವ ದೇಶಕ್ಕೆ ಸವಾಲಾಗಿ ಪರಿಣಮಿಸಿದೆ. ಜನರನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆಯಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚೆಚ್ಚು ಕಂಡುಬರುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಇದರಿಂದ ನ್ಯಾಯಕ್ಕಾಗಿ ಪೊಲೀಸ್ ಕಚೇರಿಗೆ ಧಾಮಿಸುವುದು ನಿಜಕ್ಕೂ ಕಷ್ಟಕರವಾಗಿದೆ.


