BBMP
Loading ...

SL Byrappa

ಪರ್ವ ಕಾದಂಬರಿ ಖ್ಯಾತಿಯ, ಪದ್ಮಭೂಷಣ ಗೌರವ ಪುರಸ್ಕೃತ ಹಿರಿಯ ಸಾಹಿತಿ ಎಸ್​.ಎಲ್​. ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ಇಂದು (ಸೆ.24) ಕೊನೆಯುಸಿರೆಳೆದಿದ್ದಾರೆ.

ಭೈರಪ್ಪ ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​. ಎಲ್​. ಭೈರಪ್ಪ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ರಾಷ್ಟ್ರೋತ್ಥಾನ ಆಸ್ಪತ್ರೆ ಕೂಡ ಸಂತಾಪ ಸೂಚಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಭಾರತದ ಪ್ರಸಿದ್ಧ ಕಾದಂಬರಿಕಾರ, ತತ್ವಜ್ಞಾನಿ, ಪದ್ಮಶ್ರೀ, ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಶ್ರೀ. ಎಸ್. ಎಲ್. ಭೈರಪ್ಪ ಅವರು ಇಂದು ಮಧ್ಯಾಹ್ನ 2.38 ಕ್ಕೆ ಹೃದಯಸ್ತಂಭನದಿಂದ ಬಳಲುತ್ತಿದ್ದರು ಮತ್ತು ಸರ್ವಶಕ್ತನ ಪಾದ ಕಮಲವನ್ನು ತಲುಪಿದರು. ಅವರ ಆತ್ಮಕ್ಕೆ ಓಂ ಶಾಂತಿ ಎಂದು ಸಂತಾಪ ಸೂಚಿಸಿದೆ.

ಭೈರಪ್ಪ ಅವರ ಪೂರ್ಣ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂದು. ಕನ್ನಡ ಸಾಹಿತ್ಯ ಲೋಕದ ದಿಗ್ಗಜ ವ್ಯಕ್ತಿಯಾಗಿದ್ದರು. 1931ರ ಆಗಸ್ಟ್ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಸಣ್ಣ ವಯಸ್ಸಿನಲ್ಲೇ ತಮ್ಮ ತಾಯಿಯ ಧೀಮಂತಿಕೆಯನ್ನು ಭೈರಪ್ಪ ಅವರು ಮೈಗೂಡಿಸಿ ಕೊಂಡು ಬೆಳೆದರು.

ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.

ಶಿಕ್ಷಣ ಮುಗಿಸಿದ ಬಳಿಕ ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಅದರ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದರು. 1961ರಲ್ಲಿ ಧರ್ಮಶ್ರೀ ಕಾದಂಬರಿ ಪ್ರಕಟಿಸಿದರು. ಇದುವರೆಗೆ ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ.

ಕರ್ನಾಟಕದ ಗ್ರಾಮೀಣ ಜೀವನದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ಆಳವಾಗಿ ಅರಿತುಕೊಂಡು ಬೆಳೆದ ಅವರ ಜೀವನವು ಅವರ ಕೃತಿಗಳಲ್ಲಿ ಪ್ರತಿಫಲಿಸುತ್ತದೆ. ಎಸ್.ಎಲ್. ಭೈರಪ್ಪ ಅವರು ಕನ್ನಡದಲ್ಲಿ 25 ವರ್ಷಗಳಿಂದಲೂ ಬೆಸ್ಟ್ ಸೆಲ್ಲಿಂಗ್ ಕಾದಂಬರಿಕಾರರಾಗಿ ಖ್ಯಾತರಾಗಿದ್ದರು. ಅವರ ಕೃತಿಗಳು ತಾತ್ವಿಕ ಆಳ ಮತ್ತು ಸಾಮಾಜಿಕ ವಿಮರ್ಶೆಯಿಂದ ಕೂಡಿವೆ. ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲ ಸಾಕಷ್ಟು ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದಗೊಂಡಿವೆ. ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.

ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975 ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪರ್ವ ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ.

1999ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು. ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *