BBMP
Loading ...

GBA

Greater Bengaluru News9 : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಆಯುಕ್ತರು, ಸ್ಥಾಯಿ ಸಮಿತಿ, ಪಾಲಿಕೆ ಸಭೆಗೆ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರು, ಟೆಂಡರ್‌ ಅನುಮೋದನೆಯ ಪ್ರಮಾಣ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ನಗರ ಪಾಲಿಕೆಯ ಆಯುಕ್ತರು 3 ಕೋಟಿ ರೂ.ವರೆಗಿನ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ, ಕಾಮಗಾರಿಗಳ ಟೆಂಡರ್‌ ಅನುಮೋದನೆ ನೀಡಬಹುದು. ಸ್ಥಾಯಿ ಸಮಿತಿ ಅಥವಾ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ 3 ಕೋಟಿಯಿಂದ 5 ಕೋಟಿ ರೂ, ಪಾಲಿಕೆ ಸಭೆಗೆ 5 ಕೋಟಿಯಿಂದ 10 ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡಲು ಅಧಿಕಾರ ನೀಡಲಾಗಿದೆ.

ಯಾವುದೇ ಕಾಮಗಾರಿಯ ಮೊತ್ತ 10 ಕೋಟಿ ರೂ. ಮೀರಿದರೆ ಅದರ ಅಂದಾಜುಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ, ಟೆಂಡರ್‌ ಅನುಮೋದನೆಯನ್ನು ಸರ್ಕಾರದಿಂದಲೇ ಪಡೆಯಬೇಕು ಎಂದು ಆದೇಶಿಸಲಾಗಿದೆ.

ಯೋಜನೆ ಅನುಷ್ಠಾನ ಘಟಕ: ಬಿಬಿಎಂಪಿಯಲ್ಲಿದ್ದ ಬೃಹತ್‌ ನೀರುಗಾಲುವೆ ವಿಭಾಗದ ಯೋಜನೆಗಳನ್ನು ಜಿಬಿಎಯಲ್ಲಿರುವ ಯೋಜನಾ ಅನುಷ್ಠಾನ ಘಟಕದ ಮುಖ್ಯ ಎಂಜಿನಿಯರ್‌ ಅವರಿಗೆ ವರ್ಗಾಯಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

238.72 ಕೋಟಿ ರೂ. ಮೊತ್ತದ ನಗರ ಪ್ರವಾಹ ಅಪಾಯ ನಿರ್ವಹಣೆ (ಎನ್‌ಡಿಎಂಎಫ್) ಕಾರ್ಯಕ್ರಮ ಯೋಜನೆ, ವಿಶ್ವ ಬ್ಯಾಂಕ್‌ ನೆರವಿನ ಜಲಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮ 2,000 ಕೋಟಿ ರೂ. ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆ ವರ್ಗಾಯಿಸಲಾಗಿದೆ.

ಯೋಜನೆ ಅನುಷ್ಠಾನ ಘಟಕಕ್ಕೆ ಎಸ್‌.ವಿ. ರಾಜೇಶ್‌ ಅವರನ್ನು ಮುಖ್ಯ ಎಂಜಿನಿಯರ್‌ ಆಗಿ ಸ್ಥಳ ನಿಯುಕ್ತಿಗೊಳಿಸಿದ್ದು, ಎರಡೂ ಯೋಜನೆಗಳನ್ನು ಅವರಿಗೆ ವಹಿಸಲಾಗಿದೆ. ಜಿಬಿಎಯಲ್ಲಿರುವ 10 ಕಾರ್ಯಪಾಲಕ ಎಂಜಿನಿಯರ್‌ಗಳಲ್ಲಿ ಅಗತ್ಯವಿರುವಷ್ಟು ಇಇಗಳನ್ನು ಈ ವಿಭಾಗಕ್ಕೆ ನೇಮಿಸಿಕೊಂಡು ಕಾಮಗಾರಿ ಕಾರ್ಯಾದೇಶ ನೀಡಿ ಅನುಷ್ಠಾನಗೊಳಿಸಬೇಕು ಎಂದು ಆದೇಶಿಸಲಾಗಿದೆ.

Leave a Reply

Your email address will not be published. Required fields are marked *