Greater Bengaluru News9: ರಾಜ್ಯದಲ್ಲಿ ಕಟ್ಟಡ ಅಗ್ನಿ ಅವಘಡ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ನಿರಾಕ್ಷೇಪಣಾ ಪತ್ರ (ಎನ್ ಒಸಿ) ನಿಯಮ ಪರಿಷ್ಕರಿಸಿದೆ.
ಅಗ್ನಿ ಶಾಮಕ, ತುರ್ತು ಸೇವೆಗಳ ಇಲಾಖೆ ನಿಯಮದಂತೆ 21 ಮೀಟರ್ ಎತ್ತರದ ಕಟ್ಟಡಗಳಿಗೆ ಎನ್‌ಒಸಿ ಕಡ್ಡಾಯವಾಗಿತ್ತು. ಇನ್ಮುಂದೆ 15 ಮೀಟರ್ ಎತ್ತರದ ಕಟ್ಟಡಗಳಿಗೂ (ಅಂದಾಜು 4 ಅಂತಸ್ತು) ಎನ್‌ಒಸಿ ಕಡ್ಡಾಯವಾಗಿದೆ. ಶೈಕ್ಷಣಿಕ ಕಟ್ಟಡ, ಆಸ್ಪತ್ರೆ, ವಸತಿ, ವಾಣಿಜ್ಯ, ಕೈಗಾರಿಕೆ, ಗೋದಾಮಿನ ಉಪಯೋಗಕ್ಕಾಗಿ ಬಹುಮಹಡಿಯ 15 ಮೀಟರ್ ಎತ್ತರದ ಕಟ್ಟಡಗಳಿಗೆ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯುವ ನಿಯಮ ಅನ್ವಯವಾಗಲಿದೆ.
ಪರಿಶೀಲನಾ ವರದಿ ಸಲ್ಲಿಕೆ
ಜಿಲ್ಲಾ ಮಟ್ಟದಲ್ಲಿ ಅಗ್ನಿಶಾಮಕ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಬಹುಮಹಡಿ ಕಟ್ಟಡ ಪರಿಶೀಲಿಸಿ ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರಾದೇಶಿಕ ‘ಆಯುಕ್ತರು ಸಲ್ಲಿಸುವ ನಿರಾಕ್ಷೇಪಣಾ ವರದಿ ಪರಿಶೀಲಿಸಿ ಸಂಬಂಧಪಟ್ಟ ಕಟ್ಟಡ ಮಾಲೀಕರಿಗೆ ನಿಗದಿತ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಕಟ್ಟಡ ಸಂಹಿತೆ 2016 ಆದೇಶನ್ವಯ 21 ಮೀಟರ್ ನಲ್ಲಿ ಅಂದಾಜು 5 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅಗ್ನಿಶಾಮಕ ಇಲಾಖೆಯಿಂದ ಎನ್‌ಓಸಿ ಪಡೆಯಲಾಗುತ್ತಿತ್ತು ಆದರೆ, 15 ಮೀಟರ್ ಕಡ್ಡಾಯಗೊಳಿಸಿರುವುದರಿಂದ 4 ಅಂತಸ್ತಿನ ಕಟ್ಟಡಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯಬೇಕು.
2 ವರ್ಷ 2,596 ಸಾವು
ರಾಜ್ಯದಲ್ಲಿ ಅಗ್ನಿ ದುರಂತದಿಂದ ಕಳೆದ ಎರಡು ವರ್ಷದಲ್ಲಿ 2,596 ಜನರು ಮೃತಪಟ್ಟಿದ್ದಾರೆ. ವಾಣಿಜ್ಯ ಕಟ್ಟಡ, ಮನೆ, ಕಾರ್ಖಾನೆ, ಗೋದಾಮು ಸೇರಿದಂತೆ ವಿವಿಧ ಕಡೆ ಸಂಭವಿಸುತ್ತಿರುವ ದುರ್ಘಟನೆಯಿಂದ ಪ್ರತಿ ವರ್ಷ 1,200 ರಿಂದ 1,300 ಜನರು ಮೃತಪಡುತ್ತಿದ್ದಾರೆ.
734 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟ
ಅಗ್ನಿಶಾಮಕ ಇಲಾಖೆಗೆ 2022-23ರಲ್ಲಿ 2.87 ಲಕ್ಷ ಕರೆಗಳು ಬಂದಿದ್ದು, 404.44 ಕೋಟಿ ರೂ. ಆಸ್ತಿ ನಷ್ಟವಾಗಿದೆ. ಆ ಪೈಕಿ 76 ಮಂದಿ ಮೃತಪಟ್ಟಿದ್ದರೆ, 123 ಮಂದಿ ರಕ್ಷಣೆ ಮಾಡಲಾಗಿದೆ. 221 ಜನರು ದುರಂತದಲ್ಲಿ ಗಾಯಗೊಂಡಿದ್ದಾರೆ. 2024-2025ರಲ್ಲಿ 2.38 ಲಕ್ಷ ಕರೆಗಳು ಬಂದಿದ್ದು, 330.26 ಕೋಟಿ ರೂ.ಆಸ್ತಿ ನಷ್ಟವಾಗಿದೆ, 48 ಮಂದಿ ಮೃತಪಟ್ಟಿದ್ದಾರೆ. 121 ಜನರ ರಕ್ಷಣೆ ಮಾಡಲಾಗಿದೆ. 201 ಮಂದಿ ಗಾಯಗೊಂಡಿದ್ದಾರೆ. ತುರ್ತು ವಾಹನಗಳು ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ 2023-2024ನೇ ಸಾಲಿನಲ್ಲಿ 1304 ಜವರು ಪ್ರಾಣ ಕಳೆದುಕೊಂಡಿದ್ದರೆ, 2024-25ನೇ ಸಾಲಿನಲ್ಲಿ 1,252 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಎರಡು ವರ್ಷದಲ್ಲಿ ರಾಜ್ಯದ ವಿವಿಧ ತಲೆಯಲ್ಲಿ ಸಾವಿನ ಸಂಖ್ಯೆ ಎರಡೂವರೆ ಸಾವಿರ ದಾಟಿದ್ದು, 734 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ.


