BBMP
Loading ...

BDA

ಬೆಂಗಳೂರು: ಉದ್ಯಾನನಗರಿಯಲ್ಲಿ ಒಂದು ಸೈಟ್ ತಗೋಬೇಕು ಅಂದ್ರೆ ಜನರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸೈಟುಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಆ ಸೈಟುಗಳ ದಾಖಲೆಗಳು ಕಾನೂನಿನ ಪ್ರಕಾರ ಕರಾರುವಾಕ್ ಆಗಿರುತ್ತವೆ ಹಾಗೂ ಅಂಥ ಕರಾರುವಾಕ್ ಆಗಿರುವ ಸೈಟುಗಳನ್ನು ಕೊಂಡರೆ ಮುಂದೆ ಯಾವುದೇ ತಕರಾರು ಇರೋದಿಲ್ಲ ಎಂಬ ಪ್ರತೀತಿಯಿದೆ. ಆದರೆ, ಇನ್ನು ಮುಂದೆ ಇದೆಲ್ಲಾ ಇತಿಹಾಸ ಸೇರಲಿದ್ದು, ಇನ್ನು ಮುಂದಿನ ಎಲ್ಲಾ ಹೊಸ ಬಡಾವಣೆಗಳು ಬಿಡಿಎ ಬದಲು ಜಿ.ಬಿ.ಎ. ಬಡಾವಣೆಗಳು ಅಥವಾ ಜಿಬಿಎ ಸೈಟುಗಳು ಎಂಬ ಹೆಸರು ಚಾಲ್ತಿಗೆ ಬರಲಿವೆ.

ಅದಕ್ಕೆ ಕಾರಣ, ಬೆಂಗಳೂರು ನಗರದ ಮುಂದಿನ ಎಲ್ಲಾ ನಗರೀಕರಣ ಹಾಗೂ ವಸತಿ ಯೋಜನೆಗಳ ಹೊಣೆಗಾರಿಕೆಯು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ವಹಿಸಿಕೊಳ್ಳಲಿದೆ. ಖಾಸಗಿ ಸುದ್ದಿ ಮಾಧ್ಯಮವೊಂದರಲ್ಲಿ ಬಂದಿರುವ ವರದಿಯ ಪ್ರಕಾರ, ಇಲ್ಲಿಯವರೆಗೆ ಬಿಡಿಎ ಏನು ವಸತಿ ಯೋಜನೆಗಳನ್ನು ಮಾಡಿದೆಯೋ ಅದೇ ಅಂತಿಮ. ಮುಂದಿನ ಎಲ್ಲಾ ವಸತಿ ಯೋಜನೆಗಳನ್ನು ಜಿಬಿಎ ಮಾಡಲಿದೆ. ಅದಕ್ಕಾಗಿ ಹೊಸತೊಂದು ಪ್ರಸ್ತಾವನೆಯನ್ನು ಜಿಬಿಎ ಸಿದ್ಧಪಡಿಸಿದ್ದು, ಅದರಲ್ಲಿ ಬೆಂಗಳೂರು ನಗರಕ್ಕೆ ಸಂಬಂಧಿಸಿದ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ನೀಡುವ ಅಧಿಕಾರವನ್ನು ತನಗೆ ನೀಡಬೇಕೆಂದು ಜಿಬಿಎ ಮನವಿ ಮಾಡಿಕೊಂಡಿದೆ. ಆ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲು ತಯಾರಿ ನಡೆಸಿದೆ.

ಬಿಡಿಎಗೆ ಈವರೆಗೆ 1,200 ಚದುರು ಕಿ.ಮೀ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮಿತಿ ಇತ್ತು. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದ ಮೇಲೆ ಬಿಡಿಎಗೆ ಇದ್ದ ಈ ಅಧಿಕಾರ ವ್ಯಾಪ್ತಿ 400 ಚದುರ ಕಿಮೀವರೆಗೆ ಸೀಮಿತವಾಗಿದೆ. ಅಲ್ಲಿಂದ ಮುಂದಕ್ಕೆ 800 ಚದರ ಕಿಮೀ ವ್ಯಾಪ್ತಿಯವರೆಗೆ ಜಿಬಿಎ ಅಧಿಕಾರ ವ್ಯಾಪ್ತಿ ಇರಲಿದೆ.

ಅದರರ್ಥ, ಬೆಂಗಳೂರು ಕೇಂದ್ರ ಭಾಗದಿಂದ ಸುತ್ತಲಿನ 400 ಚದುರ ಕಿಲೋಮೀಟರ್ ವರೆಗೆ ಮಾತ್ರ ಬಿಡಿಎ ತನ್ನ ಅಧಿಕಾರವನ್ನು ಬಳಸಿಕೊಳ್ಳಬಹುದು. ಅಲ್ಲಿಂದ ಮುಂದಕ್ಕೆ ಹೊಸದಾಗಿ ಬರುವ ಲೇಔಟ್ ಗಳಿಗೆ ಜಿಬಿಎ ರೂಪಿಸುವ ನಿಯಮಾವಳಿಗಳು ಅನ್ವಯವಾಗುತ್ತವೆ. ಅದಕ್ಕಾಗಿ ಹೊಸ ನಿಯಮಗಳನ್ನು ಜಿಬಿಎ ಜಾರಿಗೊಳಿಸಲಿದೆ. ಸೈಟುಗಳು, ಮನೆಗಳು, ಮನೆಗಳನ್ನು ಕಟ್ಟುವಾಗ ಪಾಲಿಸಬೇಕಾದ ಸೆಟ್ ಬ್ಯಾಕ್ ನಿಯಮಗಳು, ಮನೆಯ ಎತ್ತರ, ವಿಸ್ತೀರ್ಣ ಮುಂತಾದವುಗಳ ಬಗ್ಗೆ ಹೊಸ ನಿಯಮಗಳು ಬರಲಿವೆ. ಕಟ್ಟಡದ ಬೈಲಾಗಳನ್ನು ತಿದ್ದುಪಡಿ ಮಾಡುವ ಸಾಧ್ಯತೆಗಳಿವೆ. ಎಲ್ಲಾ ರೀತಿಯ ಸ್ಥಿರಾಸ್ತಿಗಳಿಗೆ ಟ್ರಾನ್ಸ್ ಫರಬಲ್ ರೈಟ್ಸ್ (ಟಿಡಿಆರ್) ಪ್ರಮಾಣಪತ್ರಗಳನ್ನು ನೀಡುವ ಹಕ್ಕು ಜಿಬಿಎ ಹೊಂದಿರುತ್ತದೆ.

ಅಷ್ಟೇ ಅಲ್ಲದೆ, ಬೆಂಗಳೂರು ನಗರದಲ್ಲಿ ಇನ್ನು ಮುಂದಿನ ಬಡಾವಣೆಗಳಿಗಾಗಿ ಜಮೀನುಗಳ ಭೂಸ್ವಾಧೀನ, ಹೊಸ ಬಡಾವಣೆಗೆ ಯೋಜನೆಗೆ ಅನುಮೋದನೆ, ಎಲ್ಲಾ ರೀತಿಯ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ನೀಡುವ ಅಧಿಕಾರವೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ್ದೇ ಆಗಿರುತ್ತದೆ.

ಒಂದೇ ನಗರದಲ್ಲಿ ಎರಡೆರಡು ಪ್ಲಾನಿಂಗ್ ಆಯೋಗಗಳಿಗೆ ಆಸ್ಪದ ನೀಡಿದ ಉದಾಹರಣೆ ಎಲ್ಲೂ ಇಲ್ಲ. ಆದರೆ, ಬಿಡಿಎ ಕೈಯ್ಯಲ್ಲಿರುವ ನಗರಾಭಿವೃದ್ಧಿ ಅಧಿಕಾರವನ್ನು ಜಿಬಿಎಗೆ ವರ್ಗಾಯಿಸಬೇಕೆಂದರೆ 1961ರ ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಅದಕ್ಕಾಗಿ ಮಸೂದೆಯನ್ನು ರೂಪಿಸಬೇಕಿದೆ.

ಅಷ್ಟೇ ಅಲ್ಲ, ಜಿಬಿಎ ಅಡಿಯಲ್ಲಿ ಬೆಂಗಳೂರಿನ ಬಿಬಿಎಂಪಿಯು ಐದು ವಿಭಾಗಗಳಾಗಿ ವಿಂಗಡಣೆಯಾಗಿದೆ. ವಲಯವಾರು ಲೆಕ್ಕಾಚಾರದಲ್ಲಿ (Zonal) ರಚನೆಯಾಗಲಿರುವ ಬಿಬಿಎಂಪಿ ಅಡಿಯಲ್ಲಿ ಅಧಿಕಾರಿಗಳು ಪ್ರತಿಯೊಂದು ಲೇಔಟ್ ಗೂ ಬಂದು ಪ್ರತಿಯೊಂದು ಮನೆಯನ್ನು ಕರಾರುವಾಕ್ ಆಗಿ ಕಟ್ಟಲಾಗಿದೆಯೇ, ಲೇಔಟ್ ನಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ, ಅಪಾರ್ಟ್ ಮೆಂಟ್ ಗಳಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬಿತ್ಯಾದಿ ಪರಿಶೀಲನೆಗಳು ನಡೆಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬೆಂಗಳೂರನ್ನು ಸುಂದರ ನಗರಿಯನ್ನಾಗಿಸಲು, ಆರೋಗ್ಯಕರ ನಗರವನ್ನಾಗಿಸಲು ರಚನೆಯಾಗಿರುವ ಜಿಬಿಎ ರಚನೆ ಮಾಡಲಾಗಿದೆ. ಜಿಬಿಎ ಕೂಡ ಅದೇ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.

Leave a Reply

Your email address will not be published. Required fields are marked *