Greater Bengaluru News9: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ನಡೆಸಲು ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ತ ಗುತ್ತಿಗೆದಾರರ ಸಂಘ ರಿ. ನಂ.33, ಅವಿನ್ಯೂ ರಸ್ತೆ, ಬೆಂಗಳೂರು-02 ಈ ಸಂಘದ ಚುನಾವಣೆಯನ್ನು ನಡೆಸಲು ಚುನಾವಣಾಧಿಕಾರಿಯನ್ನು ನೇಮಕ ಮಾಡಲು ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ಸಂಘದ ಕಾರ್ಯಕಾರಿ ಮಂಡಳಿ ಚುನಾವಣೆಯನ್ನು ನಡೆಸಲು ಸೋಮಶೇಖರಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಉಪ ನಿಬಂಧಕರ ಕಛೇರಿ, 1ನೇ ವಲಯ, ಬೆಂಗಳೂರು ಇವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಲು ಸರ್ಕಾರ ಅನುಮತಿ ನೀಡಿದೆ. ಸಂಘದ ಚುನಾವಣೆಯನ್ನು ನಿಯಮಾನುಸಾರ 6 ತಿಂಗಳ ಒಳಗೆ ಜರುಗಿಸಲು ಸೂಚಿಸಲಾಗಿದೆ.
ಆಡಳಿತಾಧಿಕಾರಿ ನೇಮಕ
ಇನ್ನು ವಿದ್ಯುತ್ ಗುತ್ತಿಗೆದಾರರ ಸಂಘದ ವಿರುದ್ಧ ಕೆಲವು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಸಂಘದ ವತಿಯಿಂದ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳ ಖರ್ಚು-ವೆಚ್ಚಗಳಲ್ಲಿ ಪಾರದರ್ಶಕವಾಗಿರುವುದಿಲ್ಲ ಹಾಗೂ ಸಂಘದ ಖಾತೆಗೆ ತೆಗೆದುಕೊಂಡಿರುವುದಿಲ್ಲ ಎಂಬ ಆರೋಪ ಮಾಡಲಾಗಿದೆ.
ಇನ್ನು ಸಂಘದ ಆಡಳಿತ ಮಂಡಳಿಯ ಅವಧಿಯು ಮುಕ್ತಾಯಗೊಂಡಿದ್ದರೂ ನಿಗದಿತ ಸಮಯದಲ್ಲಿ ಸಂಘದ ಚುನಾವಣೆಯನ್ನು ನಡೆಸಲು ಆಡಳಿತ ಮಂಡಳಿಯ ವಿಫಲವಾಗಿ, ಸಂಘದ ಆಡಳಿತದಲ್ಲಿ ಶೂನ್ಯತೆ ಉಂಟಾಗಿದ್ದು, ಅವಧಿ ಮುಗಿದಿರುವ ಆಡಳಿತ ಮಂಡಳಿಯೇ ಮುಂದುವರೆದಿರುವ ಹಿನ್ನಲೆಯಲ್ಲಿ ಸಂಘದ ಹಿತದೃಷ್ಟಿಯಿಂದ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ, ಅವರ ನೇತೃತ್ವದಲ್ಲಿ ನ್ಯೂನತೆಗಳನ್ನು ಸರಿಪಡಿಸಿ, ಬೈಲಾ ರೀತ್ಯ ಸಂಘದ ಚುನಾವಣೆ ನಡೆಸಿ, ನೂತನ ಆಡಳಿತ ಮಂಡಳಿಯನ್ನು ಚುನಾಯಿಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಪ್ರಭಾರವನ್ನು ಹಸ್ತಾಂತರಿಸುವುದು ಸೂಕ್ತವೆಂದು ಮನಗಂಡು ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 77(ಎ) ರನ್ವಯ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಅದರಂತೆ ಈ ಸಂಘಕ್ಕೆ ಶ್ರೀ ಸುರೇಶ್‌ಗೌಡ, ಸಹಕಾರ ಸಂಘಗಳ ಜಂಟಿ ನಿಬಂಧಕರು(ಕಾನೂನು ಕೋಶ), ಸಹಕಾರ ಸಂಘಗಳ ನಿಬಂಧಕರ ಕಚೇರಿ, ಬೆಂಗಳೂರು ಇವರನ್ನು ಮುಂದಿನ 06 ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಸುರೇಶ್ ಗೌಡ ಅವರು ಆಡಳಿತಾಧಿಕಾರಿಯಾಗಿ ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಂಡು. ಸಂಘದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ. ಆಡಳಿತ ಮಂಡಳಿಗೆ ಚುನಾವಣೆ ನಡೆಸಿ. ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಸರ್ಕಾರ ಕೋರಿದೆ. ಇದೀಗ ಸಂಘದ ವಿರುದ್ಧ ಆರೋಪ ಮಾಡಿರುವವರು ಮುಂದಿನ 6 ತಿಂಗಳಲ್ಲಿ ಆರೋಪ ಸಾಬೀತು ಮಾಡಬೇಕಿದೆ. ಮುಂದೆ ಏನು ನಡೆಯುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.


