Greater Bengaluru News9 : ನಾಡ ಹಬ್ಬ ದಸರಾ ಆರಂಭವಾಗೋಕೆ ಕೆಲವೇ ದಿನಗಳು ಬಾಕಿ ಇದೆ. ಮೈಸೂರು ದಸರಾ ಎಂದರೆ ಸಾಕು ಎಲ್ಲರ ಕಣ್ಣು ಅಗಲವಾಗುತ್ತದೆ. ಅದೆಷ್ಟೋ ಜನರು ಮೈಸೂರು ದಸರಾವನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಾರೆ. ವಿವಿಧ ರಾಜ್ಯಗಳಿಂದ ಸಹ ಜನರು ದಸರಾ ನೋಡಲು ಬರುತ್ತಾರೆ.
ದಸರಾ ನೋಡಲು ಬಯಸುವ ಜನರಿಗೆ ಸರ್ಕಾರ ಸಹಾಯ ಮಾಡುತ್ತಿದ್ದು, ಈ ಸಮಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂ ಸವಾರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಮುಂಗಡ ಬುಕ್ ಮಾಡಲು ಅವಕಾಶ ಕೊಟ್ಟಿದೆ. ಹಾಗಾದ್ರೆ ದಸರಾಗೆ (Mysuru Dasara 2025) ಯಾವ ರೀತಿ ಪಾಸ್ (Pass) ಬುಕ್ ಮಾಡಬೇಕು? ಇದಕ್ಕೆ ಏನೆಲ್ಲಾ ರೂಲ್ಸ್ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಕಾರ್ಯಕ್ರಮ
ಇನ್ನು ಈ ವರ್ಷದ ದಸರಾ ಆಚರಣೆ ಸೆಪ್ಟೆಂಬರ್ 22ರಿಂದ ಆರಂಭವಾಗುತ್ತಿದ್ದು, ಅಕ್ಟೋಬರ್ 2ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದೆ. ದಸರಾ ವೈಭವವನ್ನ ಹೆಚ್ಚು ಮಅಡಲು ಮೈಸೂರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಭರ್ಜರಿ ತಯಾರಿ ಮಾಡಿದ್ದು, ಈ ಸಮಯದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರವೇಶ ಟಿಕೆಟ್‌ಗಳು ಹಾಗೂ ಗೋಲ್ಡನ್ ಪಾಸ್‌ಗಳ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಈ ವಿಚಾರವಾಗಿ ದಸರಾ ವಿಶೇಷಾಧಿಕಾರಿ ಹಾಗೂ ಮೈಸೂರು ಜಿಲ್ಲಾ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಸೆಪ್ಟೆಂಬರ್ 6 ರಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಮೈಸೂರು ದಸರಾ ನೋಡಲು ಬುಕ್ಕಿಂಗ್ ಮಾಡಲು ಸರ್ಕಾರ ಬಿಡುಗಡೆ ಮಾಡಿರುವ ವೆಬ್‌ಸೈಟ್: https://mysoredasara.gov.in/ ಮೂಲಕ ನೀವು ಮೊದಲೇ ಪಾಸ್ ಬುಕ್ ಮಾಡಿಕೊಳ್ಳಬಹುದಾಗಿದೆ.
ಮೈಸೂರು ದಸರಾದ ಮೆರಗು ಎಂದರೆ ಅದು ಕೊನೆಯ ದಿನ ನಡೆಯುವ ಜಂಬೂ ಸವಾರಿ. ಚಾಮುಂಡೇಶ್ವರಿ ತಾಯಿಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ಅಭಿಮನ್ಯು ಗಾಂಭೀರ್ಯವಾಗಿ ನಡೆಯುವುದನ್ನ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕಾಯುತ್ತಿರುತ್ತಾರೆ. ಈ ಬಾರಿಯ ಜಂಬೂ ಸವಾರಿಯನ್ನ ನೋಡಲು 3500 ರೂಪಾಯಿ ಟಿಕೆಟ್ ದರವಾಗಿದ್ದು, ಹಾಗೆಯೇ, ಪಂಜಿನ ಕವಾಯಿತ್‌ಗೆ 1500 ರೂಪಾಯಿ ನಿಗಧಿ ಮಾಡಲಾಗಿದೆ. ನಿಮಗೆ ಗೋಲ್ಡನ್ ಪಾಸ್ ಬೇಕು ಎಂದರೆ 6500 ರೂಪಾಯಿ ನೀಡಬೇಕಾಗುತ್ತದೆ. ಇದನ್ನ ಖರೀದಿ ಮಾಡಿದರೆ ನೀವು ವಿವಿಧ ಕಾರ್ಯಕ್ರಮಗಳಿಗೆ ಮಾತ್ರವಲ್ಲದೇ, ಅದರ ಜೊತೆಗೆ ಮೈಸೂರು ಝೂ, ಚಾಮುಂಡಿ ದೇವಸ್ಥಾನ, ಮೈಸೂರು ಅರಮನೆ ನೋಡಬಹುದಾಗಿದ್ದು, ಅದರ ಜೊತೆಗೆ ಡ್ರೋನ್ ಶೋ, ಜಂಬೂ ಸವಾರಿ, ಪಂಜಿನ ಕವಾಯಿತ್ ನೋಡಲು ಸಹ ಅವಕಾಶ ಸಿಗುತ್ತದೆ.
ಈ ಪಾಸ್‌ಗಳನ್ನ ಪಡೆಯಲು ಅಥವಾ ಮೊದಲೇ ಟಿಕೆಟ್ ಬುಕ್ ಮಾಡಲು ಸರ್ಕಾರ ಕೆಲ ನಿಯಮಗಳನ್ನ ಹಾಕಿದ್ದು, ಮುಖ್ಯವಾಗಿ ಸರ್ಕಾರ ನೀಡಿದ ಐಡಿ ಕಾರ್ಡ್ ಇರುವುದು ಕಡ್ಡಾಯವಾಗಿದೆ. ಅದರ ಜೊತೆಗೆ ಮೂರನೇ ವ್ಯಕ್ತಿಯಿಂದ ಕಾರ್ಡ್ ಪಡದಿರುವವರು ಆ ವ್ಯಕ್ತಿಯ ಐಡಿ ಪ್ರೂಫ್ ಹಾಗೂ ಅಧಿಕೃತ ಪತ್ರ ಕಡ್ಡಾಯವಾಗಿ ಇರಬೇಕು ಎನ್ನಲಾಗಿದೆ. ಇನ್ನು ಗೋಲ್ಡನ್ ಪಾಸ್ ಹೊಂದಿರುವರಿಗೆ ಬೇರೆ ದಿನ ಡ್ರೋನ್ ಶೋ ಆಯೋಜನೆ ಮಾಡಲಾಗಿದ್ದು, ಅದನ್ನ ಕಾರ್ಡ್‌ನ ಹಿಂದಿನ ಭಾಗದಲ್ಲಿ ಮಾಹಿತಿ ನೀಡಲಾಗಿರುತ್ತದೆ. ಆ ದಿನಾಂಕದಂದು ಮಾತ್ರ ಪ್ರವೇಶ ಸಿಗಲಿದೆ.
ಇನ್ನು ಒಮ್ಮೆ ಬುಕ್ ಮಾಡಿದ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಲು ಹಾಗೂ ಬೇರೆಯವರಿಗೆ ಕೊಡಲು ಯಾವುದೇ ಅವಕಾಶವಿಲ್ಲ. ಇನ್ನು ಟಿಕೆಟ್ ಹಾಗೂ ಪಾಸ್ ಬುಕ್ಕಿಂಗ್ ವಿಚಾರವಾಗಿ ಯಾವುದೇ ವಿಚಾರಣೆ ಇದ್ದರೆ ಅದನ್ನ ವಿಚಾರಿಸಲು ದೂರವಾಣಿ: 8217395364 (ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ) ಇಮೇಲ್: info@ticketgenie.in ಮೂಲಕ ಸಂಪರ್ಕ ಮಾಡಬಹುದು.


