Greater Bengaluru News 9 : ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಚಿತ್ರದುರ್ಗ ಬೆಸ್ಕಾಂ ಇಇ ತಿಮ್ಮರಾಯಪ್ಪ ನಗರದಲ್ಲಿ ಗುರುವಾರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಹೊಳಲ್ಕೆರೆ ತಾಲೂಕು ದುಮ್ಮಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಆರ್. ಸಂಜಯ್ ಅವರಿಗೆ 35 ಲಕ್ಷ ರೂ.ಮೊತ್ತದ ಕಾಮಗಾರಿಯ ಕಾರ್ಯಾದೇಶ ಕೊಡಲು ಆರೋಪಿ ತಿಮ್ಮರಾಯಪ್ಪ ಶೇ.10 ಕಮಿಷನ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಆಗಸ್ಟ್ 30 ಮತ್ತು ಸೆ.2ರಂದು ನಡೆದಿದ್ದ ಲಂಚದ ಬೇಡಿಕೆ ಸಂಭಾಷಣೆಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಸಂಜಯ್, ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಚಿತ್ರದುರ್ಗ ಅಮೃತ ಆಯುರ್ವೇದ ಕಾಲೇಜು ಬಳಿ 3.50 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ತಿಮ್ಮರಾಯಪ್ಪ ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಶಕ್ಕೆ ಪಡೆದಿರುವ ಆರೋಪಿಯ ವಿರುದ್ಧ ಲೋಕಾಯಕ್ತ ಪೊಲೀಸ್ ನಿರೀಕ್ಷಕ ಬಸವರಾಜ ಬಿ. ಲಮಾಣಿ ಅವ ರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಎನ್. ಮೃತ್ಯುಂಜಯ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹೊಸಪೇಟೆ ಲೋಕಾಯುಕ್ತ ಡಿವೈಎಸ್ಪಿ ಸಚಿನ್ಚಲವಾದಿ, ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಬಿ. ಮಂಜುನಾಥ್, ಮುಷ್ತಾಕ್ಅಹ್ಮದ್ ಡಿ. ಶೇಖ್ ಮತ್ತವರ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ಎನ್. ವಾಸುದೇವರಾಮ ತಿಳಿಸಿದ್ದಾರೆ.


