BBMP
Loading ...

BBMP News

ಬೆಂಗಳೂರು (ಆ.30): ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ ಸೇರಿದಂತೆ ಐದು ನಗರಪಾಲಿಕೆಗಳಿಗೆ ಕಚೇರಿ ಕಟ್ಟಡಗಳನ್ನು ನಿಗದಿಪಡಿಸಿ ಬಿಬಿಎಂಪಿಯ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಕಚೇರಿಗೆ ಹಾಲಿ ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದಲ್ಲಿರುವ ಅನೆಕ್ಸ್‌1 ಮತ್ತು ಅನೆಕ್ಸ್‌ 2 ಕಟ್ಟಡ ನಿಗದಿ ಪಡಿಸಲಾಗಿದೆ.

ಐದು ನಗರಪಾಲಿಕೆಗೆ ತಲಾ 2 ವಲಯ ಮಾಡಲಾಗಿದ್ದು, ಅದರಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ಬಿಬಿಎಂಪಿ ಪೂರ್ವ ವಲಯ ಕಚೇರಿ, ವಲಯ-2ಕ್ಕೆ ಕೇಂದ್ರ ಕಚೇರಿ ಆವರಣದ ಅನೆಕ್ಸ್‌ -3 ಕಟ್ಟಡ ನಿಗದಿ ಪಡಿಸಲಾಗಿದೆ.

ಬೆಂಗಳೂರು ಪೂರ್ವ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ಮಹದೇವಪುರ ವಲಯ ಕಚೇರಿ, ವಲಯ-2ಕ್ಕೆ ಹಾಲಿ ಕೆ.ಆರ್‌. ಪುರ ಮುಖ್ಯ ಎಂಜಿನಿಯರ್‌ ಕಚೇರಿ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ಆರ್‌ ಆರ್‌ ನಗರ ವಲಯ ಆಯುಕ್ತರ ಕಚೇರಿ, ವಲಯ-2ಕ್ಕೆ ಹಾಲಿ ಚಂದ್ರಾಲೇಔಟ್‌ನ ಪಾಲಿಕೆ ಸೌಧ ಕಚೇರಿ, ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ಯಲಹಂಕ ವಲಯ ಆಯುಕ್ತರ ಕಚೇರಿ, ವಲಯ-2ಕ್ಕೆ ಹಾಲಿ ದಾಸರಹಳ್ಳಿ ವಲಯ ಆಯುಕ್ತರ ಕಚೇರಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ದಕ್ಷಿಣ ವಲಯ ಆಯುಕ್ತರ ಕಚೇರಿ, ವಲಯ-2ಕ್ಕೆ ಹಾಲಿ ಬೊಮ್ಮನಹಳ್ಳಿಯ ವಲಯ ಕಚೇರಿಯನ್ನು ನಿಗದಿಪಡಿಸಲಾಗಿದೆ.

ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನಾಗಿ ಐದು ನಗರ ಪಾಲಿಕೆಗಳಾಗಿ ವಿಭಜನೆ ಮಾಡುವುದಕ್ಕೆ ರಾಜ್ಯ ಸರ್ಕಾರ ಈಗಾಗಲೇ ಕರಡು ಆದೇಶ ಹೊರಡಿಸಿದೆ. ಜತೆಗೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಮಾಡಲಾಗಿದೆ. ಪ್ರತಿ ನಗರ ಪಾಲಿಕೆಗೆ ತಲಾ ಎರಡು ವಲಯಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಆಯುಕ್ತರಿಗೆ, ವಿಶೇಷ ಆಯುಕ್ತರಿಗೆ, ಜಂಟಿ ಆಯುಕ್ತರಿಗೆ, ಮುಖ್ಯ ಎಂಜಿನಿಯರ್‌ಗಳಿಗೆ ಸೂಕ್ತ ಕಚೇರಿ ವ್ಯವಸ್ಥೆ ಮಾಡಬೇಕು ಎಂದು ವಲಯ ಆಯುಕ್ತರಿಗೆ ಆದೇಶದಲ್ಲಿ ಸೂಚಿಸಲಾಗಿದೆ.

ಜಿಬಿಎಗೆ ಹೊಸ ಲೋಗೋ
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ರಚನೆಯಾಗುವ ಐದು ಪಾಲಿಕೆಗಳ ಫಲಕ ಅಳವಡಿಕೆಗೆ ಹಾಗೂ ಆದೇಶ ಪತ್ರದಲ್ಲಿ ಜಿಬಿಎ ಲೋಗೋ ಅಗತ್ಯವಾಗಿರುವುದರಿಂದ ಹೊಸ ಲೋಗೋ ಸಿದ್ಧಪಡಿಸುವುದಕ್ಕೆ ಸೂಚನೆ ನೀಡಲಾಗಿದ್ದು, ಕರ್ನಾಟಕ ಸರ್ಕಾರದ ಲೋಗೋ ಮಾದರಿಯಾಗಿಟ್ಟುಕೊಂಡು ಜಿಬಿಎ ಲೋಗೋ ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ವೆಬ್‌ಸೈಟ್‌ ಬದಲಾವಣೆಗೆ ಸೂಚನೆ
ಬಿಬಿಎಂಪಿಯ ಎಲ್ಲಾ ವೆಬ್‌ ಸೈಟ್‌ ಗಳನ್ನು ಜಿಬಿಎ ಎಂದು ಬದಲಾವಣೆ ಮಾಡುವುದಕ್ಕೂ ಸೂಚನೆ ನೀಡಲಾಗಿದೆ. ಸೆ,2ಕ್ಕೆ ಎಲ್ಲಾ ಸಿದ್ಧವಾಗಿರಬೇಕು. ಏಕಕಾಲಕ್ಕೆ ಬಿಬಿಎಂಪಿಯ ಎಲ್ಲಾ ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ ಎಲ್ಲವೂ ಬದಲಾಗುವಂತೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *