BBMP
Loading ...

Kichcha Sudeep

ಕನ್ನಡ ಚಲನಚಿತ್ರ ಕಂಡಂತಹ ಧೀಮಂತ ನಟ ದಿವಂಗತ ಡಾ. ವಿಷ್ಣುವರ್ಧನ್ ಅವರ​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ, ಅವರ ಸ್ಮಾರಕವಿದ್ದ ಅಭಿಮಾನ್​ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಕನ್ನಡದ ಚಿತ್ರರಂಗದ ಹಿರಿಯ ನಟ ದಿವಂಗತ ಬಾಲಣ್ಣ ಕುಟುಂಬಕ್ಕೆ ಸೇರಿದ್ದ 20 ಎಕರೆ ಜಾಗದಲ್ಲಿ ಅಭಿಮಾನ್​ ಸ್ಟುಡಿಯೋವನ್ನು ನಿರ್ಮಾಣ ಮಾಡಲಾಗಿತ್ತು. ವಿಷ್ಣು ಅವರು ವಿಧಿವಶರಾದಾಗ ಅಂತಿಮ ವಿಧಿ-ವಿಧಾನಗಳನ್ನು ಸ್ಟುಡಿಯೋ ಸಮೀಪದ ಪುಟ್ಟ ಜಾಗದಲ್ಲಿ ನಡೆಸಿ, ಸ್ಮಾರಕ ಸಹ ನಿರ್ಮಾಣ ಮಾಡಲಾಗಿತ್ತು. ಆದರೆ, ಬಾಲಣ್ಣನ ಕುಟುಂಬದವರು ಆಸ್ತಿ ವಿಚಾರವಾಗಿ ಕೋರ್ಟ್​ ಮೆಟ್ಟಿಲೇರಿದ ಬಳಿಕ ವಿಷ್ಣು ಸ್ಮಾರಕ ಜಾಗ ವಿವಾದದಾತ್ಮಕ ಸ್ಥಳವಾಗಿ ಮಾರ್ಪಾಡಾಯಿತು. ದಶಕಗಳಿಂದ ಈ ವಿವಾದ ನಡೆದುಕೊಂಡು ಬರುತ್ತಲೇ ಇತ್ತು.

ಆದರೆ, ಇತ್ತೀಚೆಗೆ ರಾತ್ರೋರಾತ್ರಿ ಪೊಲೀಸರ ಸರ್ಪಗಾವಲಿನಲ್ಲಿ ಏಕಾಏಕಿ ವಿಷ್ಣು ಸ್ಮಾರಕವನ್ನು ನೆಲಸಮ ಮಾಡಿದಾಗ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿರು. ವಿಷ್ಣು ಸ್ಮಾರಕ ಮಾತ್ರವಲ್ಲ, ನಟ ಕಿಚ್ಚ ಸುದೀಪ್​ ಅವರು ಬಾಲಣ್ಣನಿಗಾಗಿ ನಿರ್ಮಿಸಿದ ಸ್ಮಾರಕವನ್ನು ಸಹ ಅವರ ಕುಟುಂಬದವರು ನೆಲಸಮ ಮಾಡಿದ್ದರು. ಆ ಜಾಗದಲ್ಲಿ ದೊಡ್ಡ ಅಪಾರ್ಟ್​ಮೆಂಟ್​ ಅಥವಾ ಮಾಲ್​ ಕಟ್ಟಲು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿತು. ಈ ಬಗ್ಗೆ ನಟ ಸುದೀಪ್​ ಹಾಗೂ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಅನೇಕ ವಿಷ್ಣು ಅಭಿಮಾನಿಗಳು​ ಗಟ್ಟಿ ಧ್ವನಿ ಎತ್ತಿದ್ದರು. ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ವಿರುದ್ಧವೂ ವೀರಕಪುತ್ರ ಶ್ರೀನಿವಾಸ್​ ಕಿಡಿಕಾರಿದ್ದರು. ನಿರ್ಮಾಪಕ ಕೆ. ಮಂಜು ಸೇರಿದಂತೆ ಹಲವಾರು ವಿಷ್ಣು ಅಭಿಮಾನಿಗಳು ಆಕ್ರೋಶ ಹೊರಹಾಕಿ ಸರ್ಕಾರ ಆದಷ್ಟು ಬೇಗ ಒಂದು ತೀರ್ಮಾನಕ್ಕೆ ಬರಬೇಕೆಂದು ಆಗ್ರಹಿಸಿದ್ದರು. ಅಂತಿಮವಾಗಿ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ.

ಅಭಿಮಾನ್​ ಸ್ಟುಡಿಯೋ ಜಾಗ ಮುಟ್ಟುಗೋಲು
ಅಭಿಮಾನ್​ ಸ್ಟುಡಿಯೋ ನಿರ್ಮಿಸಲು ಬಾಲಣ್ಣನಿಗೆ ಸರ್ಕಾರ 20 ಎಕರೆ ಜಾಗ ಮಂಜೂರು ಮಾಡಿತ್ತು. ಸ್ಟುಡಿಯೋ ಕೂಡ ನಿರ್ಮಾಣವಾಗಿತ್ತು. ಆದರೆ, ಸ್ಟುಡಿಯೋ ಅಭಿವೃದ್ಧಿ ಮಾಡಬೇಕೆಂದು ಹೇಳಿ ಅವರ ಕುಟುಂಬ ನ್ಯಾಯಾಲಯದಿಂದ ಅನುಮತಿ ಪಡೆದು 20 ಎಕರೆಯಲ್ಲಿ 10 ಎಕರೆಯನ್ನು ಮಾರಾಟ ಮಾಡಿತ್ತು. ಆದರೆ, ಸ್ಟುಡಿಯೋ ಮಾತ್ರ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಬಾಲಣ್ಣ ಕುಟುಂಬದವರು ಹಣ ಹಂಚಿಕೊಂಡು ಸುಮ್ಮನಾಗಿದ್ದರು. ಯಾವಾಗ ವಿಷ್ಣು ಸ್ಮಾರಕ ಕೆಡವಿದರೋ ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಕೂಗು ಕೇಳಿಬಂತು. ಏಕೆಂದರೆ, ಸ್ಟುಡಿಯೋ ಉದ್ದೇಶ ಬಿಟ್ಟು ಬೇರೆ ಯಾವುದೇ ಉದ್ದೇಶಕ್ಕೆ ಆ ಜಾಗವನ್ನು ಬಳಸುವಂತಿಲ್ಲ ಎಂದು ಸರ್ಕಾರ ಒಂದು ಷರತ್ತು ಹೇಳಿಯೇ ಭೂಮಿ ಮಂಜೂರು ಮಾಡಿತ್ತು. ಆದರೆ, ಷರತ್ತನ್ನು ಬಾಲಣ್ಣ ಕುಟುಂಬ ಗಾಳಿಗೆ ತೂರಿದೆ. ಅಲ್ಲದೆ, 10 ಎಕರೆಯನ್ನು ಸಹ ಮಾರಿಕೊಂಡಿದೆ. ಹೀಗಾಗಿ ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಆಗ್ರಹ ಕೇಳಿಬಂದಿತ್ತು. ಅಂತಿಮವಾಗಿ ಇದೀಗ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆ ಪ್ರದೇಶವನ್ನು ಮುಟ್ಟುಗೋಲು ಹಾಕಿಕ್ಕೊಂಡು ಅರಣ್ಯ ಪ್ರದೇಶವೆಂದು ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬ ವರದಿಗಳು ಬಂದಿವೆ.

ಇನ್ನು ಮೈಸೂರಿನಲ್ಲಿ ಸರ್ಕಾರವು ವಿಷ್ಣುವರ್ಧನ್ ಸ್ಮಾರಕವನ್ನು ಈಗಾಗಲೇ ನಿರ್ಮಿಸಿದೆ. ಆದರೆ, ಅಭಿಮಾನಿಗಳು ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದ 10 ಗುಂಟೆ ಜಾಗವನ್ನು ಸ್ಮಾರಕಕ್ಕಾಗಿ ಉಳಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರ, ಫಿಲ್ಮ್ ಚೇಂಬರ್, ಮತ್ತು ಕನ್ನಡ ಚಿತ್ರರಂಗದ ಕಲಾವಿದರು ಒಗ್ಗಟ್ಟಿನಿಂದ ಕ್ರಮ ಕೈಗೊಳ್ಳಬೇಕೆಂದು ಅಭಿಮಾನಿಗಳ ಕೂಗಿದೆ. ಪರ್ಯಾಯವಾಗಿ, ನಟ ಕಿಚ್ಚ ಸುದೀಪ್ ಅವರು ಕೆಂಗೇರಿಯಲ್ಲಿ ಅರ್ಧ ಎಕರೆ ಜಾಗವನ್ನು ಖರೀದಿಸಿ, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಸೆಪ್ಟೆಂಬರ್ 18, 2025ರಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದು ಈ ಹೊಸ ಸ್ಮಾರಕಕ್ಕೆ ಅಡಿಗಲ್ಲು ಹಾಕಲು ಯೋಜನೆ ಇದೆ.

Leave a Reply

Your email address will not be published. Required fields are marked *