ಭವಿಷ್ಯದ ಬೆಂಗಳೂರು ನಿರ್ಮಾಣದ ಆಶಯದೊಂದಿಗೆ ರೂಪಿಸಲಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನೇಮಕವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಐದು ಪಾಲಿಕೆಗಳಾಗಿ ವಿಭಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದೀಗ ಪ್ರಾಧಿಕಾರದ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇಮಕಗೊಂಡಿದ್ದಾರೆ. ಇದರೊಂದಿಗೆ 75 ಸದಸ್ಯರನ್ನು ಸಹ ನೇಮಕ ಮಾಡಲಾಗಿದೆ.
ಬಿಬಿಎಂಪಿಯನ್ನ ಐದು ಭಾಗಗಳನ್ನಾಗಿ ವಿಂಗಡಿಸಿ, ಈಗಿನ ಬಿಬಿಎಂಪಿ ಕೇಂದ್ರ ಕಚೇರಿಯನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯಾಗಿ ಬದಲಾಯಿಸುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ಪದನಿಮಿತ್ತ ಸದಸ್ಯರನ್ನು ನೇಮಿಸಲಾಗಿದೆ. ಇದರಲ್ಲಿ ಕೇಂದ್ರದಲ್ಲಿರುವ ಬೆಂಗಳೂರಿನ ಸಚಿವರು, ಬೆಂಗಳೂರಿನ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಚಿವರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನ ಪದನಿಮಿತ್ತ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.








