ಮಂಗಳೂರು: ಕಳೆದ ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ಹಲವಾರು ಕೊಲೆಗಳು, ಅತ್ಯಾಚಾರಗಳು ಮತ್ತು ಸಮಾಧಿಗಳು ನಡೆದಿವೆ ಎಂದು ಆರೋಪಿಸಿದ್ದ ದೂರುದಾರರನ್ನು ಈ ಆರೋಪಗಳ ತನಿಖೆಗಾಗಿ ರಚಿಸಲಾದ ಎಸ್‌ಐಟಿ ಶನಿವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅನಾಮಿಕ ದೂರುದಾರ ನೀಡಿದ ಹೇಳಿಕೆಗಳು ಮತ್ತು ಒದಗಿಸಿದ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡುಬಂದ ನಂತರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಎಸ್‌ಐಟಿ ತನಿಖೆ ಮುಂದುವರಿಸಿದೆ. ದೂರುದಾರ-ಸಾಕ್ಷಿಯನ್ನು ದೀರ್ಘ ಗಂಟೆಗಳ ವಿಚಾರಣೆಯ ನಂತರ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬೆಳ್ತಂಗಡಿಗೆ ಕರೆತಂದ ಅಧಿಕಾರಿಗಳು
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಾಸ್ಕ್ಮ್ಯಾನ್ಗೆ ಎಸ್‌ಐಟಿ ಅಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆದಿದೆ. ಬಳಿಕ ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ SIT ಮನವಿ ಮಾಡಲಿದ್ದು, ಆ ಮೂಲಕ ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮಾಸ್ಕ್ಮ್ಯಾನ್ ಆರೋಪದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಮಾಸ್ಕ್ಮ್ಯಾನ್ ಸಿಎನ್ ಚಿನ್ನಯ್ಯನನ್ನು ತನಿಖೆ ಮಾಡಿದ್ದರು. ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಕೂಡ ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ಮಾಸ್ಕ್ಮ್ಯಾನ್ ವಿಚಾರಣೆ ಮಾಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಇದೀಗ ಬಂಧಿಸಲಾಗಿದೆ.
ಬಂಧನಕ್ಕೆ ಕಾರಣ
ಅನಾಮಿಕ ದೂರುದಾರನು ನೀಡಿದ ಮಾಹಿತಿ ಮತ್ತು ತನಿಖೆ ನಂತರ ದೊರೆತ ವಾಸ್ತವಾಂಶಗಳ ನಡುವೆ ಭಾರಿ ವೈರುಧ್ಯಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಎಸ್‌ಐಟಿಯು ಈ ವ್ಯಕ್ತಿ ಸುಳ್ಳು ಮಾಹಿತಿ ನೀಡಿದ್ದಾನೆ, ತಪ್ಪು ದೂರು ಕೊಟ್ಟಿದ್ದಾನೆ ಮತ್ತು ತನಿಖೆಗೆ ಅಡ್ಡಿಪಡಿಸಿದ್ದಾನೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.


