ಸರ್ಕಾರದ ಬೊಕ್ಕಸ ತುಂಬುವ ಇಲಾಖೆಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ಮಿತಿಮೀರಿರುವ ಸದ್ದು ಮತ್ತೊಮ್ಮೆ ಸ್ಪೋಟಿಸಿದೆ. ಇಲಾಖೆಗೆ ಸಂಬಂಧಪಟ್ಟ ಪ್ರತಿಯೊಂದ ಕೆಲಸಕ್ಕೂ ತಿಂಗಳಿಗೆ ಇಂತಿಷ್ಟು ಹಣವನ್ನು ಅಧಿಕಾರಿಗಳೇ ನಿಗದಿಪಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವೆಂಬಂತೆ ಅಬಕಾರಿ ಉಪ ಆಯುಕ್ತರೊಬ್ಬರು ಮಾತನಾಡಿರುವ ಲಂಚದ ವಿಡಿಯೋ ವೈರಲ್ ಆಗಿದ್ದು ಇಲಾಖೆಯ ಭ್ರಷ್ಟಾಚಾರವನ್ನು ಸಾಕ್ಷೀಕರಿಸಿದೆ, ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಬಾರ್, ಪಬ್ ಸೇರಿ ಇತರ ಬಗೆಯ ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ತಿಂಗಳಿಗೆ ಕೋಟ್ಯಂತರ ರೂ. ಸಂಗ್ರಹಿಸಲಾಗುತ್ತಿದೆ ಎಂಬುದು ಹೊಸ ಆರೋಪದ ತಿರುಳು. ಹೊಸ ಲೈಸೆನ್ಸ್ ಮಂಜೂರಾತಿ ಸೇರಿ ಪ್ರತಿ ಕೆಲಸಕ್ಕೆ ಇಂತಿಷ್ಟು ಕಮಿಷನ್ ನಿಗದಿ ಪಡಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಚೆನ್ನಾಗಿ ವ್ಯಾಪಾರ ನಡೆಯುವ ಮದ್ಯದಂಗಡಿಗೆ ಇನ್ನಷ್ಟು ಮಂಥ್ಲಿ ಮನಿ ನೀಡುವಂತೆ ಬೇಡಿಕೆ ಇಡುತ್ತಿರುವ ಆರೋಪವೂ ಇದೆ. ಕ್ಲಬ್ ಮತ್ತು ಪಬ್ ನಡೆಸುವವರು ಸರಾಸರಿ 2 ಲಕ್ಷ ರೂ. ಮಂಥ್ಲಿ ಮನಿ ನೀಡಬೇಕು. ಮದ್ಯದಂಗಡಿ ಸಂಬಂಧ ಏನಾದರೂ ವಿವಾದ ಇದ್ದರೆ ಇನ್ನಷ್ಟು ಹಣಕ್ಕೆ ಬೇಡಿಕೆ ಇಡಲಾಗುತ್ತದೆ. ಹಣ ನೀಡಲು ನಿರಾಕರಿಸುವ ಮದ್ಯದಂಗಡಿ ಗಳಿಗೆ ಅನಗತ್ಯ ಕಿರುಕುಳ ಕೊಡಲಾಗುತ್ತದೆ. ಪ್ರತಿ ತಿಂಗಳು ಸಂದಾಯವಾಗುವ ಹಣ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಂಚಿಕೆಯಾಗುತ್ತದೆ ಎಂದು ಇಲಾಖೆ ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ.
ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ವರ್ಷ ಸರಾಸರಿ ಐದಾರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ದೂರುಗಳು ದಾಖಲಾಗುತ್ತಿವೆ. ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಹಲವು ಪ್ರಕರಣ ವರದಿಯಾಗಿವೆ. ಲಂಚ ನೀಡದಿದ್ದರೆ ಇಲಾಖೆಯಲ್ಲಿ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಇಲಾಖೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಲಂಚಗುಳಿತನ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ. ಸನ್ನದುದಾರರಿಂದ ಲಂಚ ವಸೂಲಿ, ಕರ್ತವ್ಯಲೋಪ ಮತ್ತು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಸೇರಿ ವಿವಿಧ ಭ್ರಷ್ಟಾಚಾರ ಸಂಬಂಧ ಇಲಾಖೆಯಲ್ಲಿ 48 ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕೇಸ್ಗಳು ದಾಖಲಾಗಿವೆ. ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಲ ಅಧಿಕಾರಿಗಳು ಅಕ್ರಮ ಆಸ್ತಿ ಹೊಂದಿದ್ದಾರೆ. ಕೆಲವರು ನೂರಾರು ಪಟ್ಟು ಆಸ್ತಿ ಮಾಡಿದ್ದಾರೆ.


