ಬೆಂಗಳೂರು: ಪಾಲಿಕೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿಸದಸ್ಯ ಟಿ.ಎನ್. ಜವರಾಯಿಗೌಡ ಅವರು ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ- 2024ರ ಜಾರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುವಾಗ ಈ ವಿಚಾರ ತಿಳಿಸಿದರು. ಈ ಮೂಲಕ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಲ ಕೂಡಿಬಂದಂತಾಗಿದೆ..
‘‘ಮೇ 15ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಾಯಿದೆ ಜಾರಿಗೊಳಿಸಿದ್ದು, ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರಾಕಾರದ ವ್ಯಾಪ್ತಿಗೆ ಸೇರಿಸಲಾಗಿದೆ. ಜುಲೈ 19ರಂದು ಐದು ಪಾಲಿಕೆಗಳನ್ನು ರಚಿಸಿ, ಆಗಸ್ಟ್ 18ರವರೆಗೆ ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿತ್ತು. ದಾಸರಹಳ್ಳಿ, ಆರ್‌ಆರ್ ನಗರ, ಪದ್ಮನಾಭನಗರ, ಮಹದೇವಪುರ, ಯಶವಂತಪುರ ಸೇರಿದಂತೆ ಕೆಲವು ವಿಧಾನಸಭಾ ಕ್ಷೇತ್ರಗಳು ಇಬ್ಭಾಗವಾಗಿರುವುದು ನಿಜ. ಇನ್ನೂ ಕೆಲವು ಪ್ರದೇಶಗಳನ್ನು ಮುಂದಿನ ದಿನಗಳಲ್ಲಿಸೇರಿಸಬೇಕಿದೆ,’’ ಎಂದು ಸ್ಪಷ್ಟಪಡಿಸಿದರು.
‘‘ಸೆಪ್ಟೆಂಬರ್ 1ರಿಂದ ವಾರ್ಡ್‌ಗಳ ಪುನರ್ ವಿಂಗಡಣೆ ನಡೆಯಲಿದೆ. ಅದಕ್ಕಾಗಿ ಪಾಲಿಕೆ ಆಯುಕ್ತರ ನೇತೃತ್ವದ ಪ್ರತ್ಯೇಕ ತಂಡವಿದೆ. ವಾರ್ಡ್‌ಗಳ ರಚನೆ ಬಗ್ಗೆ ಪುನರ್ ವಿಂಗಡಣೆ ಬಳಿಕ ಅಸೂಚನೆ ಹೊರಡಿಸಲಾಗುವುದು,’’ ಎಂದು ವಿವರಿಸಿದರು.
ಐದು ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ
ಇದೇ ಆಗಸ್ಟ್ 9ರಂದು ರಾಜ್ಯ ಸರ್ಕಾರವು ಹೊಸದಾಗಿ ರಚನೆಯಾದ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಉದ್ದೇಶದಿಂದ ‘ಗ್ರೇಟರ್ ಬೆಂಗಳೂರು ಆಡಳಿತ (ಚುನಾವಣೆ) ನಿಯಮಗಳು-2025’ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ಚುನಾವಣೆ ಚುನಾವಣಾ ಆಯೋಗದ ಮೇಲ್ವಿಚಾರಣೆಯಡಿಯಲ್ಲಿ ನಡೆಯಲಿದ್ದು, ಆಯುಕ್ತರು ಚುನಾವಣಾ ಆಯೋಗದೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ. ನಾಮಪತ್ರಗಳ ಸ್ವೀಕಾರ, ಪರಿಶೀಲನೆ, ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಹಲವು ಕಾರ್ಯವಿಧಾನಗಳನ್ನು ಈ ನಿಯಮಗಳಲ್ಲಿ ವಿವರಿಸಲಾಗಿದೆ.
ಡಿಸೆಂಬರ್ ನಲ್ಲಿ ಬೆಂಗಳೂರಿನ 5 ಪಾಲಿಕೆಗಳಿಗೆ ಚುನಾವಣೆ?
ಡಿಸೆಂಬರ್ ವೇಳೆಗೆ 6 ವರ್ಷಗಳಿಂದ ಮುಂದೂಡಲ್ಪಟ್ಟಿರುವ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಗ್ರೇಟರ್ ಬೆಂಗಳೂರು ವ್ಯಾಪ್ತಿಯನ್ನು 5 ಪಾಲಿಕೆಗಳಾಗಿ ವಿಭಜಿಸುವ ಕುರಿತ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಜನರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ವಾರ್ಡ್‌ಗಳ ವಿಂಗಡಣೆ ಮತ್ತು ಮೀಸಲಾತಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಡಿಸೆಂಬರ್‌ನಲ್ಲಿ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಪ್ರಮಾಣಪತ್ರ
ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಇದೇ ಜುಲೈ 29ರಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಿದೆ. ಬೆಂಗಳೂರಿನ ಮಹಾನಗರ ಪಾಲಿಕೆಯನ್ನು ಐದು ಭಾಗಗಳಾಗಿ ವಿಭಜಿಸಿ ಹೊಸ ಗಡಿಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ತಾವು ಸಿದ್ಧರಾಗಿರುವುದಾಗಿ ಸರ್ಕಾರವು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ಈಗಾಗಲೇ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನವೆಂಬರ್ 1ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ನಂತರ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ, ನವೆಂಬರ್ ಅಂತ್ಯದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.


