ಬೆಂಗಳೂರು: ವಿಧಾನಸಭೆಯಲ್ಲಿ ಮಂಗಳವಾರ ಇ-ಖಾತಾ ಅವ್ಯವಸ್ಥೆ , ಒಸಿ ಮತ್ತು ಸಿ.ಸಿ. ಪ್ರಮಾಣಪತ್ರ ಹಾಗೂ ವಲಯ ನಿಯಮಾವಳಿಗಳ ಮಾರ್ಪಾಡು ಕುರಿತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ. ಜ್ಯೋತಿ ಗಣೇಶ್ ರವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಇ ಖಾತಾ ಅಂತ ಮಾಡಿದ್ದಾರೆ ಅದರಿಂದ ಜನರು ಎಷ್ಟು ಕಷ್ಟ ಅನುಭವಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸರ್ಕಾರಕ್ಕೂ ಇದು ತಿಳಿದಿದೆ. ಅಲ್ಲದೆ, ವಿದ್ಯುತ್ ಸಂಪರ್ಕ ಕೂಡ ನೀಡುತ್ತಿಲ್ಲ. ಒಸಿ, ಸಿಸಿ ಮತ್ತು ಇ ಖಾತಾ ಅವ್ಯವಸ್ಥೆ ಬಗೆಹರಿಸದಿದ್ದರೆ ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಾರೆ ಎಂದು ಜ್ಯೋತಿ ಗಣೇಶ್ ಹೇಳಿದರು.
ನಮಗೆ ಸುಪ್ರೀಂ ಕೋರ್ಟ್ ಆದೇಶ ಗೊತ್ತಿದೆ. ಬೇಕಿದ್ದರೆ ಸಮೀಕ್ಷೆ ಮಾಡಿಸಿ, ಏನಾದರೂ ಮಾಡಿ ಜನರಿಗೆ ಒಂದು ವಿನಾಯಿತಿ ನೀಡಿ. ಜನರೆಲ್ಲ ಶಾಪ ಹಾಕುತ್ತಿದ್ದಾರೆ. 30 x 40 ಸೈಟ್ಗೂ ಕರೆಂಟ್ ಕೊಡ್ಲಿಲ್ಲ ಅಂದ್ರೆ ಹೇಗೆ ಸರ್? ಏನಾದರೂ ವಿನಾಯಿತಿ ಕೊಡಿ ಎಂದು ಕೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಮುನಿರತ್ನ ಮಾತನಾಡಿ, ಒಸಿ, ಸಿಸಿ ಇಲ್ಲದೇ ನಾಲ್ಕು ಲಕ್ಷ ಕುಟುಂಬಗಳು ಇಂದು ಸಂಕಷ್ಟದಲ್ಲಿ ಸಿಲುಕಿವೆ ಎಂದರು. ಶಾಸಕ ಹಾಗೂ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸದನದಲ್ಲಿ ಒಸಿ, ಸಿಸಿ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರು.
ಬಿಜೆಪಿ ನಾಯಕರ ಹೇಳಿಕೆಗೆ ಉತ್ತರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಅನಧಿಕೃತವಾಗಿ ನಿರ್ಮಿಸಿರುವ ಸಣ್ಣ ವಿಸ್ತೀರ್ಣದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡಲು ಸರ್ಕಾರ ಚಿಂತಿಸುತ್ತಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸದನದಲ್ಲಿ ನಡೆದ ಸಂಪೂರ್ಣ ಚರ್ಚೆಯ ವಿಡಿಯೋ ಇಲ್ಲಿದೆ….


