ಬೆಂಗಳೂರು: ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ತಡರಾತ್ರಿ 12:01 ನಿಮಿಷಕ್ಕೆ ಶ್ರೀಕ್ಷೇತ್ರದಲ್ಲಿ ವಿಧಿ ವಶರಾಗಿದ್ದಾರೆ.
ಶ್ರೀ ಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿರವರ ಅಂತಿಮ ದರ್ಶನವನ್ನು ಇಂದು (ಆಗಸ್ಟ್ 16) ಶ್ರೀಮಠದ ಆವರಣದಲ್ಲೇ ಏರ್ಪಡಿಸಲಾಗಿದೆ.
ಮಧ್ಯಾಹ್ನ 3 ಗಂಟೆಗೆ ವಿವಿಧ ಧಾರ್ಮಿಕ ಮುಖಂಡರು, ಪೀಠಾಧ್ಯಕ್ಷರ ನೇತೃತ್ವದಲ್ಲಿ ಭೈರವೈಕ್ಯರಾದ ಶ್ರೀಗಳ ಅಂತಿಮ ವಿಧಿ ವಿಧಾನಗಳು ನೆರವೇರಲಿದ್ದು, ಶ್ರೀಗಳ ಉತ್ತರಾಧಿಕಾರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿರವರು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೇರವೇರಿಸಲಿದ್ದಾರೆ.
ಮಠದ ಬಗ್ಗೆ ಮಾಹಿತಿ
ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠವು ಬೆಂಗಳೂರು-ಮೈಸೂರು ರಸ್ತೆಯ ಕೆಂಗೇರಿಯಲ್ಲಿ ಸ್ಥಿತವಾಗಿದೆ ಮತ್ತು ಒಕ್ಕಲಿಗ ಸಮುದಾಯದ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಈ ಮಠವು 1974ರಿಂದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಇದೀಗ ಅವರು ವಿಧಿವಶರಾಗಿದ್ದಾರೆ. ಮುಂದೆ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಆದಿಚುಂಚನಗಿರಿ ಮಠದೊಂದಿಗೆ ನಾಥ ಪರಂಪರೆಯ ಭಾಗವಾಗಿದೆ, ಇದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.


