BBMP
Loading ...

Darshan

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಬೆನ್ನಲ್ಲೇ ಎ2 ಆರೋಪಿ ನಟ ದರ್ಶನ್​ರನ್ನು ಪೊಲೀಸರು ಬಂಧಿಸಿದ್ದಾರೆ.​ ಈಗಾಗಲೇ ಎ1 ಆರೋಪಿ ಹಾಗೂ ದರ್ಶನ್​ ಗೆಳತಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನು ಮತ್ತೆ ಜೈಲಿಗೆ ಕಳುಹಿಸಲಾಗುತ್ತದೆ.

ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಉಳಿದುಕೊಂಡಿದ್ದ ದರ್ಶನ್​, ಇಂದು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದರು. ಈರೋಡ್ ಜಿಲ್ಲೆಯ ಅಂದಿಯೂರಿನಲ್ಲಿ ನಡೆಯುತ್ತಿರುವ ಗುರುನಾಥಸ್ವಾಮಿ ಕುದುರೆ ಹಾಗು ಹಸುಗಳ ಜಾತ್ರೆಗೆ ದರ್ಶನ್​ ತೆರಳಿದ್ದರು. ಇಂದು ಬೆಳ್ಳಂಬೆಳಗ್ಗೆ ಚಾಮರಾಜನಗರ ಜಿಲ್ಲೆ ಗಡಿಭಾಗದ ಮೂಲಕ ಅಂದಿಯೂರಿಗೆ ತೆರಳಿದ್ದರು. ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ದರ್ಶನ್​ರನ್ನು ಬಂಧಿಸಲಾಗಿದೆ.

ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಮನೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಪತ್ನಿ ವಿಜಯಲಕ್ಷ್ಮೀ ಉಳಿದುಕೊಂಡಿರುವ ಅಪಾರ್ಟ್​ಮೆಂಟ್​ಗೆ ಮಾಧ್ಯಮಗಳ ಕಣ್ತಪ್ಪಿಸಿ ಹಿಂಬದಿ ಗೇಟ್​ನಿಂದ ಆಗಮಿಸಿದರು. ಬಳಿಕ 15ನೇ ಮಹಡಿಯ 415ನೇ ಫ್ಲ್ಯಾಟ್​ಗೆ ತೆರಳಿದರು. ದರ್ಶನ್​ ಅವರ ಜೀಪ್​ ಮುಂದಿನ ಗೇಟ್​ನಲ್ಲಿ ಆಗಮಿಸಿತು. ಆದರೆ, ದರ್ಶನ್​ ಇದ್ದ ಇನ್ನೋವಾ ಕಾರು ಹಿಂಬದಿ ಗೇಟ್​ನಿಂದ ಆಗಮಿಸಿತು. ಮನೆಯಲ್ಲಿರುವಾಗಲೇ ದರ್ಶನ್​ರನ್ನು ಬಂಧಿಸಲಾಗಿದೆ.

ಗೋವಿಂದರಾಜನಗರ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಸುಬ್ರಹ್ಮಣ್ಯ ಹಾಗೂ ಕಾಮಾಕ್ಷಿ ಪಾಳ್ಯ ಠಾಣೆಯ ಇನ್ಸ್​ಪೆಕ್ಟರ್​ ನಾಗೇಶ್​ ನೇತೃತ್ವದಲ್ಲಿ ದರ್ಶನ್​ ಬಂಧನವಾಗಿದೆ. ಜಾಮೀನು ಸಿಗುವ ಮುನ್ನ ದರ್ಶನ್​ ಬಳ್ಳಾರಿ ಜೈಲಿನಲ್ಲಿದ್ದರು. ಹೀಗಾಗಿ ದರ್ಶನ್​ರನ್ನು ಮತ್ತೆ ಬಳ್ಳಾರಿ ಜೈಲಿಗೆ ಕಳುಹಿಸಲಾಗುತ್ತದೆ.

ಅಂದಹಾಗೆ, ಕಳೆದ 7 ತಿಂಗಳಿಂದ ಜಾಮೀನಿನ ಮೇಲೆ ಹೊರಗಡೆ ಇದ್ದ ದರ್ಶನ್​ ಮತ್ತೆ ಜೈಲು ಸೇರಬೇಕಾದ ಸನ್ನಿವೇಶ ಎದುರಾಗಿದೆ. ಆರೋಗ್ಯ ನೆಪ ಹೇಳಿ ಹೈಕೋರ್ಟ್​ನಿಂದ ಜಾಮೀನು ಪಡೆದಿದ್ದ ದರ್ಶನ್​ಗೆ ಸುಪ್ರೀಂಕೋರ್ಟ್​ ಶಾಕ್​ ನೀಡಿದೆ. ದರ್ಶನ್​ ಸೇರಿದಂತೆ ಎಲ್ಲ 7 ಆರೋಪಿಳಿಗೆ ಹೈಕೋರ್ಟ್​ ನೀಡಿದ್ದ ಜಾಮೀನು ಆದೇಶವನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ ರದ್ದು ಮಾಡಿತು. ಹೈಕೋರ್ಟ್​ ನೀಡಿದ ಜಾಮೀನಿನಲ್ಲಿ ದೋಷವಿದೆ. ಜೈಲಿನಲ್ಲಿ ಆರೋಪಿಗಳಿಗೆ ಫೈವ್​ ಸ್ಟಾರ್​ ಟ್ರೀಟ್​ಮೆಂಟ್​ ನೀಡಲಾಗಿದೆ. ಈ ಪ್ರಕರಣ ಬೆಳಗಕಿಗೆ ಬಂದ ಕೂಡಲೇ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದೊಂದು ಲ್ಯಾಂಡ್​​ ಮಾರ್ಕ್​ ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿತು. ಅಲ್ಲದೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿ ಜೈಲಿನ ಲಾನ್​ನಲ್ಲಿ ಸಿಗರೇಟ್​ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್​ ಎಚ್ಚರಿಸಿದೆ.

Leave a Reply

Your email address will not be published. Required fields are marked *