ಇಂದು (ಆಗಸ್ಟ್ 10) ಕರ್ನಾಟಕ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಹಾಗೂ ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದರು. ಸುಮಾರು 15 ತಿಂಗಳುಗಳ ನಂತರ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ಕಾರಿನ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಬೆಂಗಳೂರು- ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಹಸಿರು ಬಾವುಟ ಹಾರಿಸುವ ಮೂಲಕ ರೈಲು ಪ್ರಯಾಣಕ್ಕೆ ಚಾಲನೆ ನೀಡಿದರು.
ಇದೇ ವೇಳೆ ವರ್ಚುವಲ್ ಆಗಿ ಅಮೃತ್ಸರ್- ಶ್ರೀ ಮತಾ ವೈಷ್ಣೋದೇವಿ ಕತ್ರಿ ಹಾಗೂ ಅಜ್ನಿ (ನಾಗಪುರ್)- ಪುಣೆಯ ಮತ್ತೆರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೂ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ಈ ವೇಳೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣ ಉಪಸ್ಥಿತರಿದ್ದರು.
ಇದೇ ವೇಳೆ ವಂದೇ ಭಾರತ್ ರೈಲಿನ ಒಳಗೆ ಹೆಜ್ಜೆ ಹಾಕಿ, ಮಕ್ಕಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಇಡೀ ಕಾರ್ಯಕ್ರಮದ ವೇಳೆ ಕೆಎಸ್ಆರ್ ನಿಲ್ದಾಣದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ, ಹಳದಿ ಮಾರ್ಗದ ಮೆಟ್ರೋ ರೈಲಿಗೆ ಚಾಲನೆ ನೀಡಲು ಜೆಪಿ ನಗರದತ್ತ ಸಾಗಿದರು.


