ತಂದೆ ಮತ್ತು ಮಗನ ನಡುವಿನ ಜಗಳ ತಡೆಯಲು ಹೋದ ಸಬ್ ಇನ್ಸ್ಪೆಕ್ಟರ್ ಒಬ್ಬರು ಬರ್ಬರವಾಗ ಹತ್ಯೆಯಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾದ ಪೊಲೀಸ್ ಅಧಿಕಾರಿಯನ್ನು ಷಣ್ಮುಗವೇಲ್ ಎಂದು ಗುರುತಿಸಲಾಗಿದೆ. ನೀವು ಏಕೆ ನಮ್ಮನ್ನು ಅಡ್ಡಿಪಡಿಸುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿ, ತಮ್ಮ ಬಳಿಯಿದ್ದ ಬೇಟೆಯಾಡುವ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿವರಗಳಿಗೆ ಬರುವುದಾದರೆ, ಮದತುಕುಲಂ ಎಐಎಡಿಎಂಕೆ ಶಾಸಕ ಮಹೇಂದ್ರನ್ ಅವರಿಗೆ ಸಂಬಂಧಿಸಿದ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮತ್ತು ಮಗ ಜಗಳವಾಡುತ್ತಿದ್ದಾರೆ ಎಂಬ ಮಾಹಿತಿ ಮಂಗಳವಾರ (ಆಗಸ್ಟ್ 05) ರಾತ್ರಿ ಪೊಲೀಸರಿಗೆ ಸಿಗುತ್ತದೆ. ಈ ಮಧ್ಯೆ, ಗಸ್ತು ತಿರುಗುತ್ತಿದ್ದ ಅಳಂಗಿಯ ದಳವಾಯಿಪಟ್ಟಣಂ ಪ್ರದೇಶದ ವಿಶೇಷ ಎಸ್ಐ ಷಣ್ಮುಗವೇಲ್, ಚಾಲಕ ಅಲಗುರಾಜ ಜೊತೆ ಸ್ಥಳಕ್ಕೆ ಧಾವಿಸುತ್ತಾರೆ.
ಈ ವೇಳೆ ತೋಟದಲ್ಲಿ ಮೂರ್ತಿ ಮತ್ತು ಅವರ ಮಗ ತಂಗರಾಜ್ ಕೆಲ ಮಾಡುತ್ತಿದ್ದರು. ಇಬ್ಬರು ಕುಡಿದ ಮತ್ತಿನಲ್ಲಿದ್ದರು. ಯಾವುದೇ ವಿಚಾರಕ್ಕೆ ಇಬ್ಬರು ಏರು ಧ್ವನಿಯಲ್ಲಿ ಜಗಳವಾಡುವುದನ್ನು ನೋಡಿ, ಸ್ಥಳೀಯರು ತುರ್ತು ಸೇವೆ ನಂಬರ್ 100ಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಬಳಿಕ ಹತ್ತಿರದಲ್ಲೇ ಇದ್ದ ಎಸ್ಐ ಷಣ್ಮುಗವೇಲ್ ಅವರಿಗೆ ಮಾಹಿತಿ ನೀಡಲಾಗುತ್ತದೆ. ತಕ್ಷಣ ಷಣ್ಮುಗವೇಲ್ ಅವರು ತಮ್ಮ ಕಾರು ಚಾಲಕನೊಂದಿಗೆ ಸ್ಥಳಕ್ಕೆ ಧಾವಿಸುತ್ತಾರೆ.
ಇದೇ ಸಂದರ್ಭದಲ್ಲಿ ಮೂರ್ತಿಯನ್ನು ಅವರ ಮಗ ತಂಗರಾಜ್ ಕೋಲುಗಳಿಂದ ಹಲ್ಲೆ ಮಾಡುವುದನ್ನು ನೋಡಿ, ಜಗಳ ಬಿಡಿಸಲು ಷಣ್ಮುಗವೇಲ್ ಪ್ರಯತ್ನಿಸುತ್ತಾರೆ. ಅಲ್ಲದೆ, ಗಂಭೀರವಾಗಿ ಗಾಯಗೊಂಡಿದ್ದ ಮೂರ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯಲೆನ್ಸ್ಗೆ ಕರೆ ಕೂಡ ಮಾಡುತ್ತಾರೆ. ಆದರೆ, ಅದೇ ಸಮಯದಲ್ಲಿ, ತಂಗರಾಜ್ ಬೇಟೆಯಾಡುವ ಚಾಕುವಿನಿಂದ ಎಸ್ಐ ಷಣ್ಮುಗವೇಲ್ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಷಣ್ಮುಗವೇಲ್ ಸ್ಥಳದಲ್ಲೇ ಸಾವಿಗೀಡಾದರು.
ಷಣ್ಮುಗವೇಲ್ ಅವರ ಚಾಲಕನ ಮೇಲೂ ತಂಗರಾಜ್ ಹಲ್ಲೆಗೆ ಯತ್ನಿಸಿದ. ಆದರೆ, ಆತ ಅಲ್ಲಿಂದ ಪರಾರಿಯಾಗಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪ್ರಸ್ತುತ ತಲೆಮರೆಸಿಕೊಂಡಿರುವ ತಂಗರಾಜ್ನನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ. ಷಣ್ಮುಗವೇಲ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ, ಅವರ ನೆರವಿಗಾಗಿ 1 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.
ರಾಜ್ಯದಲ್ಲಿ 10 ದಿನಗಳವರೆಗೂ ಭಾರಿ ಮಳೆ: ಬೆಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ವರುಣನ ಅಬ್ಬರ


