ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ ಅವರುಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದೆ. ಕರ್ನಾಟಕ ಹೈಕೋರ್ಟ್, ದರ್ಶನ್ ಹಾಗೂ ಇತರರಿಗೆ ಜಾಮೀನು ನೀಡುವಾಗ ಸೂಕ್ತ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು, ದರ್ಶನ್ ಮತ್ತು ಪವಿತ್ರಾ ಗೌಡಗೆ ಮತ್ತೆ ಜೈಲು ಸೇರುವ ಭೀತಿ ಶುರುವಾಗಿದೆ. ಇದೀಗ ದರ್ಶನ್ ಪರ ವಕೀಲರು ತಮ್ಮ ಜಾಮೀನು ರದ್ದು ಮಾಡದೇ ಇರಲು ಲಿಖಿತ ಕಾರಣಗಳನ್ನು ಸುಪ್ರೀಂಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಇಬ್ಬರೂ ನೀಡಿರುವ ಕಾರಣಗಳು ಇಲ್ಲಿವೆ…
ಸರ್ಕಾರವು ಸಹ ಲಿಖಿತ ಕಾರಣಗಳನ್ನು ಸುಪ್ರೀಂಕೋರ್ಟ್ಗೆ ನೀಡಿದ್ದು, ದರ್ಶನ್ ಹಾಗೂ ಪವಿತ್ರಾ ಅವರುಗಳು ರೇಣುಕಾ ಸ್ವಾಮಿಯ ಅಪಹರಣ ಮತ್ತು ಕೊಲೆಯಲ್ಲಿ ಸಕ್ರಿಯರಾಗಿ ಭಾಗಿ ಆಗಿದ್ದರು ಎಂದು ಆರೋಪಿಸಿದೆ. ಇದೀಗ ದರ್ಶನ್ ಪರ ವಕೀಲರು ನೀಡಿರುವ ಲಿಖಿತ ಕಾರಣಗಳಲ್ಲಿ, ದರ್ಶನ್ ಅವರ ಬಂಧನದ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ದರ್ಶನ್ ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು, ಬೆಂಗಳೂರಿನಲ್ಲಿ FIR ದಾಖಲು, ಬಂಧನಕ್ಕೆ ಕಾರಣವನ್ನು ಸಂಜೆ 6:30 ರವರೆಗೂ ಲಿಖಿತವಾಗಿ ನೀಡಿರುವುದಿಲ್ಲ. ಬಂಧನಕ್ಕೆ ಕಾರಣಗಳನ್ನು ನೀಡದೆ ಇರುವುದು ಕಾನೂನು ಉಲ್ಲಂಘನೆ ಎಂದಿದ್ದಾರೆ.
ದರ್ಶನ್ ಜಾಮೀನು ರದ್ದುಪಡಿಸುವುದು ಕಠಿಣ ಕ್ರಮವಾಗಲಿದೆ, ದರ್ಶನ್ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಅಪಹರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಯಾವುದೆ ಸಾಕ್ಷ್ಯವಿಲ್ಲ, ಅಪಹರಣಕ್ಕೆ ದರ್ಶನ್ ಸೂಚನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ದರ್ಶನ್ ಮತ್ತು ಎ-3 ನಡುವೆ ಕರೆಗಳು ಅಥವಾ ವಾಟ್ಸಾಪ್ ಸಂದೇಶಗಳ ವಿನಿಮಯ ಆಗಿಲ್ಲ. ಸಾಕ್ಷಿಗಳಾದ ಕಿರಣ್, ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಅವರ ಹೇಳಿಕೆಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ 7 ದಿನಗಳ ನಂತರ ಕಿರಣ್ ಹೇಳಿಕೆ ದಾಖಲಿಸಲಾಗಿದೆ, ಸಾಕ್ಷಿಗಳಾದ ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಕೋರ್ಟ್ನಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಿಲ್ಲ, ಮೂರು ಸೆಕೆಂಡ್ ವೀಡಿಯೊ ಇದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ರಾಜ್ಯ ಸರ್ಕಾರದ ವಾದದಲ್ಲಿ ಹುರುಳಿಲ್ಲ, ಮೂರು ಸೆಕೆಂಡ್ ಗಳ ವಿಡಿಯೋ ಅಸ್ತಿತ್ವದಲ್ಲೇ ಇಲ್ಲ. ಮೂರು ಸೆಕೆಂಡಿನ ವಿಡಿಯೋ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿಲ್ಲ ಅಥವಾ ಹೈಕೋರ್ಟ್ನಲ್ಲಿ ಸಲ್ಲಿಸಿಲ್ಲ, ಮರಣದ ಸಮಯವನ್ನು ಪ್ರಾಸಿಕ್ಯೂಷನ್ ಕಥೆಗೆ ಅನುಗುಣವಾಗಿ ನಿರ್ಧರಿಸಲಾಗಿದೆ ಎಂದು ಕಾರಣಗಳನ್ನು ನೀಡಲಾಗಿದೆ. ಇನ್ನೂ ಕೆಲವು ಕಾರಣಗಳನ್ನು ದರ್ಶನ್ ಪರ ವಕೀಲರು ನೀಡಿದ್ದು, ಈ ಎಲ್ಲ ಕಾರಣಗಳನ್ನು ಪರಿಗಣಿಸಿ ದರ್ಶನ್ ಜಾಮೀನನ್ನು ರದ್ದು ಮಾಡಬಾರದು ಎಂದು ಮನವಿ ಮಾಡಲಾಗಿದೆ.
ಪವಿತ್ರಾ ಗೌಡ ಹೇಳಿದ ಕಾರಣಗಳೇನು?
ಪವಿತ್ರಾ ಗೌಡ ಅವರು ಪ್ರಕರಣದ ಮೊದಲ ಆರೋಪಿ ಆಗಿದ್ದು, ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ. ಪವಿತ್ರಾ ಗೌಡ ಪರ ವಕೀಲರು ಸುಪ್ರೀಂಕೋರ್ಟ್ಗೆ ನೀಡಿರುವ ಕಾರಣಗಳಲ್ಲಿ, ಪ್ರಮುಖವಾಗಿ, ಪವಿತ್ರಾ ಗೌಡ, ಮೃತ ರೇಣುಕಾಸ್ವಾಮಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಘಟನೆ ನಡೆದ ದಿನ ಇತರೆ ಆರೋಪಿಗಳೊಟ್ಟಿಗೆ ಪವಿತ್ರಾ ಗೌಡ ಅವರಿಗೆ ಯಾವುದೇ ಸಂವಹನ ನಡೆದಿಲ್ಲ, ಪವಿತ್ರಾ ಗೌಡ, ರೇಣುಕಾ ಸ್ವಾಮಿಯ ಅಪಹರಣ ಮತ್ತು ಕೊಲೆಯ ಸಂಚಿನಲ್ಲಿ ಭಾಗಿ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿದ್ದಾರೆ. ರೇಣುಕಾ ಸ್ವಾಮಿ ಕೊಲೆಗೂ ತಮಗೂ ಸಂಬಂಧ ಇಲ್ಲ. ರೇಣುಕಾ ಸ್ವಾಮಿಯ ಮೃತ ದೇಹದ ಮೇಲಿನ ಗಾಯಗಳ ಪವಿತ್ರಾಗೌಡ ರಿಂದ ಆಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ‘ನಾನು ಒಬ್ಬಂಟಿ ಪೋಷಕಳಾಗಿದ್ದು ನನಗೆ 10ನೇ ತರಗತಿಯಲ್ಲಿ ಓದುತ್ತಿರುವ ಮಗಳನ್ನು ನೋಡಿಕೊಳ್ಳಬೇಕಿದೆ. ಜೊತೆಗೆ ವಯಸ್ಸಾದ ಪೋಷಕರು ಇದ್ದು, ಅವರಿಗೆ ನಾನೇ ಆಧಾರವಾಗಿದ್ದೇನೆ. ನನಗೆ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲ, ನನ್ನ ಬಂಧನಕ್ಕೆ ಕಾರಣಗಳನ್ನು ಪೊಲೀಸರು ಲಿಖಿತವಾಗಿ ನೀಡಲಾಗಿಲ್ಲ , ಮಹಿಳೆಯಾಗಿರುವುದರಿಂದ, ಜಾಮೀನು ರದ್ದು ಮಾಡುವುದು ಕಠಿಣ ಕ್ರಮವಾಗಲಿದೆ’ ಎಂದು ಪವಿತ್ರಾ ಗೌಡ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ.
ಸರ್ಕಾರ ನೀಡಿರುವ ಕಾರಣಗಳೇನು?
ಮೃತ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ, ದರ್ಶನ್ ಲಿವ್-ಇನ್ ಸಂಬಂಧದಲ್ಲಿದ್ದ ಪವಿತ್ರ ಗೌಡಗೆ ಇನ್ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದ. ಇದರಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ, ಪಟ್ಟಣಗೆರೆಯ ಶೆಡ್ನಲ್ಲಿ ಕೊಲೆ ಮಾಡಲಾಯಿತು. ಆರೋಪಿಗಳು ಕೊಲೆ ನಡೆದ ಸ್ಥಳದಲ್ಲಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಅಪಹರಣದ ಸಮಯದಲ್ಲಿ ಮತ್ತು ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳು ಇದ್ದರು ಎಂದು ತಿಳಿದುಬಂದಿದೆ. ಪಟ್ಟಣಗೆರೆಯ ಶೆಡ್ಗೆ ಆರೋಪಿಗಳು, ಮೃತ ವ್ಯಕ್ತಿ ಪ್ರವೇಶಿಸುವುದನ್ನು ಐವರು ಸಾಕ್ಷಿಗಳು ನೋಡಿದ್ದಾರೆ ಎಂದು ಸರ್ಕಾರ ಸುಪ್ರೀಂಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಕೊಲೆ ನಡೆದ ಸ್ಥಳದಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿ ಮತ್ತು A-2 ದರ್ಶನ್, A-4 ರಾಘವೇಂದ್ರ, A-5 ನಂದೀಶ್ ಮತ್ತು A-11 ನಾಗರಾಜು ಅವರುಗಳ ಪಾದರಕ್ಷೆಗಳಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿಗಳು ಹೊಂದಾಣಿಕೆಯಾಗುತ್ತವೆ. DNA ವಿಶ್ಲೇಷಣೆಯಿಂದ ಮೃತ ರೇಣುಕಾಸ್ವಾಮಿ ರಕ್ತದ ಕಲೆಗಳು ಹಲವು ಆರೋಪಿ ಬಟ್ಟೆಗಳ ಮೇಲೆ ಕಂಡುಬಂದಿವೆ. ಕೊಲೆ ನಡೆದ ಸಮಯದಲ್ಲಿ A-1 ಪವಿತ್ರಾ ಗೌಡ ಮತ್ತು A-2 ದರ್ಶನ್ ಇಬ್ಬರೂ ಸಕ್ರಿಯವಾಗಿ ಭಾಗಿಯಾಗಿದ್ದರು, ಹೈಕೋರ್ಟ್ನ ಜಾಮೀನು ನೀಡುವ ತೀರ್ಪು ಸರಿಯಾಗಿಲ್ಲ ಮತ್ತು ದಾಖಲೆಗಳಿಗೆ ವಿರುದ್ಧವಾಗಿದೆ , ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಎಂದು ಹೈಕೋರ್ಟ್ ಹೇಳಿರುವುದು ತಪ್ಪು, ಮೃತನ ಮೇಲಿನ ಗಾಯಗಳು ಇದನ್ನು ಸುಳ್ಳಾಗಿಸುತ್ತವೆ ಎಂದು ಸರ್ಕಾರ ವಾದಿಸಿದೆ. ಸಾಕ್ಷಿಯಾದ ಪುನೀತ್ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ತನಿಖೆಯನ್ನು ಅನುಮಾನಿಸಿರುವುದು ಸರಿಯಲ್ಲ. ಹೇಳಿಕೆಯನ್ನು ತಡವಾಗಿ ದಾಖಲಿಸಲು ಸೂಕ್ತ ಕಾರಣಗಳನ್ನು ನೀಡಲಾಗಿದೆ. ಪ್ರಕರಣದಲ್ಲಿ ಸೂಕ್ತ ವಿಧಿ ವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು CDR ಪುರಾವೆಗಳಿವೆ ಎಂದು ಹೈಕೋರ್ಟ್ ಪರಿಗಣಿಸಿಲ್ಲ. ಜಾಮೀನು ವಿಚಾರಣೆಯ ಹಂತದಲ್ಲಿ ಹೈಕೋರ್ಟ್ ‘ಮಿನಿ ಟ್ರಯಲ್’ ನಡೆಸಿದೆ. A-2 ದರ್ಶನ್ ಗೆ ಹಿಂದೆ ಕೂಡ ಅಪರಾಧ ಚಟುವಟಿಕೆಗಳಲ್ಲಿ ಭಾಗಿ ಆಗಿದ್ದರು ಅವರಿಗೆ ಅಪರಾಧಿಕ ಹಿನ್ನಲೆ ಇದೆ. A-2 ದರ್ಶನ್ ಬೆನ್ನು ನೋವಿನ ಕಾರಣಕ್ಕೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದರೂ. ಆದರೆ ಅದರ ಮರುದಿನವೇ ಚಲನಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಅವರು ಜಾಮೀನನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಸರ್ಕಾರ ಆರೋಪಿಸಿದೆ. ಈ ಪ್ರಕರಣದಲ್ಲಿ, A-2 ದರ್ಶನ್ ಮತ್ತು ಅವರ ಸಹ ಆರೋಪಿಗಳ ಪ್ರಭಾವದಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ಪ್ರಕರಣದ ವಿಚಾರಣೆಯನ್ನು ದಿನನಿತ್ಯ ನಡೆಸಲು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸಲು ಸರ್ಕಾರ ಒಪ್ಪಿಕೊಂಡಿದೆ ಎಂದಿದೆ.
ನಾಳೆಯಿಂದ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ; ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ಶೋ!


