BBMP
Loading ...

KJ George

ಬೆಂಗಳೂರು: ಸ್ಮಾರ್ಟ್ ಮೀಟರ್ ಹಗರಣದ ಹಿನ್ನೆಲೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ವಜಾಗೊಳಿಸಬೇಕು. ಇಲ್ಲವೇ ಅವರ ರಾಜೀನಾಮೆ ಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಿರೀಟಕ್ಕೆ ಈ ಭ್ರಷ್ಟಾಚಾರ ಹಗರಣವು ಮತ್ತೊಂದು ಹೊಸ ಗರಿಯಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಉತ್ತರವೇನು ?. 15 ಸಾವಿರ ಕೋಟಿ ಎಂದರೆ ಸಣ್ಣ ಮೊತ್ತವಲ್ಲ. ಹಾಗಾಗಿ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಹಗರಣ ಆರೋಪದಲ್ಲಿ ದ್ವೇಷ, ವೈಮನಸ್ಸು ಇಲ್ಲ. ಜನರ ಹಿತ ಕಾಪಾಡಲು ಮತ್ತು ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಈ ಕೆಲಸ ನಡೆದಿದೆ. ಸದನದಲ್ಲೂ ಇದನ್ನು ಗಮನ ಸೆಳೆಯುವ ಪ್ರಶ್ನೆ ಮೂಲಕ ಪ್ರಸ್ತಾಪಿಸಿದ್ದೇವೆ. ಆದರೆ, ಅವರು ಸಮರ್ಪಕ ಉತ್ತರ ನೀಡಿಲ್ಲ ಎಂದು ಟೀಕಿಸಿದರು.

ನಿಯಮಗಳ ಉಲ್ಲಂಘನೆ
ಅರ್ಹತೆ ಇಲ್ಲದ ಗುತ್ತಿಗೆದಾರನಿಗೆ ಗುತ್ತಿಗೆ, ಬ್ಲ್ಯಾಕ್ ಲಿಸ್ಟೆಡ್ ಕಂಪೆನಿ ಜೊತೆ ಒಡಂಬಡಿಕೆ, ನಿಯಮಾವಳಿ ಉಲ್ಲಂಘನೆ ಮಾಡಿದ್ದನ್ನು ಹಾಗೂ ರಾಷ್ಟ್ರದಲ್ಲೇ ಗರಿಷ್ಠ- ದುಬಾರಿ ದರ ವಿಧಿಸುತ್ತಿರುವುದು, ಕಡ್ಡಾಯ ಇಲ್ಲದಿದ್ದರೂ ಕಡ್ಡಾಯ ಮಾಡಿದ್ದನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೇವೆ ಎಂದು ಗಮನ ಸೆಳೆದರು.

ಎಲ್ಲ ಉಲ್ಲಂಘನೆಗಳನ್ನು ತಿಳಿಸಿದರೂ ಸ್ವಾರ್ಥಿಗಳಾಗಿ, ಎಟಿಎಂ ಸರಕಾರದಂತೆ ಹಗಲುದರೋಡೆ ಮಾಡಲು ಮುಂದಾದರು. ಏಪ್ರಿಲ್‍ನಲ್ಲೇ ಲೋಕಾಯುಕ್ತ ಪೊಲೀಸ್‍ಗೆ ದೂರು ಕೊಟ್ಟಿದ್ದೇವೆ.

ನಂತರ ಮರು ಮನವಿ ನೀಡಿದ್ದೇವೆ. ತಡವಾದ ಕಾರಣ ಚುನಾಯಿತ ಪ್ರತಿನಿಧಿಗಳ ಕ್ರಿಮಿನಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ಶಾಸಕರಾದ ನಾನು, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ಅವರು ಕೋರ್ಟಿನ ಬಾಗಿಲು ತಟ್ಟಿದ್ದೇವೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ್ ವಿವರಿಸಿದರು.

ಕೋರ್ಟ್ ಅನುಮತಿ
ಸರ್ಕಾರಕ್ಕೆ ಕಣ್ಣು, ಕಿವಿ, ತಲೆ ಇದೆಯೆ ? ರಾಜ್ಯಪಾಲರಿಗೂ ಅರ್ಜಿ ಕೊಟ್ಟೆವು. ಮರು ಮನವಿ ಬಗ್ಗೆ ಸಲಹೆ ಬಂತು. ಅದರಂತೆ ಕೇಸು ದಾಖಲಿಸಿದೆವು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಅನುಮತಿ ಕೇಳಿದ್ದೇವೆ ಎಂದರು.

ಖಾಸಗಿ ದೂರು (ಪಿಸಿಆರ್) ಸಲ್ಲಿಸಲು ಒಪ್ಪಿಗೆ ಲಭಿಸಿದೆ. ಬುಧವಾರ ಸಂಜೆ ಇದರ ಮೌಖಿಕ ಆದೇಶ ಸಿಕ್ಕಿದೆ. ಲೋಕಾಯುಕ್ತರಿಗೂ ತಿಳಿಸಲು ಸೂಚಿಸಿದ್ದಾರೆ ಎಂದ ಅವರು, ಈಗಿನ ಗುತ್ತಿಗೆಯನ್ನು ಕೈಬಿಡಬೇಕು.

ಅಧಿಕಾರ ದುರ್ಬಳಕೆ ಕಾಣುತ್ತಿದೆ. ಕೆ.ಜೆ.ಜಾರ್ಜ್ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯವನ್ನು ಮುಂದಿಟ್ಟರು. ಸಿದ್ದರಾಮಯ್ಯನವರೇ ಎಲ್ಲಿದ್ದೀರಿ? ನಿಮ್ಮ ನಿಲುವೇನು? ಸ್ಪಷ್ಟನೆ ಏನು? ನಿಮ್ಮ ಮೇಲೆ, ನಿಮ್ಮ ಸರಕಾರದ ಮೇಲೆ ಸಾಕಷ್ಟು ಆಪಾದನೆಗಳಿವೆ ಎಂದು ಟೀಕಿಸಿದರು.

ಪಿ.ಸಿ.ಆರ್ ದಾಖಲಾದುದು ಗೊತ್ತಾದ ಮೇಲಾದರೂ ರಾಜೀನಾಮೆ ಕೊಡುವಿರಾ ಜಾರ್ಜ್ ಅವರೇ ಎಂದು ಕೇಳಿದರು. ನ್ಯಾಯಕ್ಕೆ ತಲೆ ಬಾಗುವುದಾಗಿ ಹೇಳಿದವರು ತಕ್ಷಣ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಸದನದಲ್ಲೂ ಈ ವಿಚಾರದ ಕುರಿತು ಹೋರಾಟ ಮಾಡುವ ಬಗ್ಗೆ ಪ್ರತಿಪಕ್ಷ ನಾಯಕರ ಜತೆಗೆ ಸಮಾಲೋಚನೆ ಮಾಡುವೆ ಎಂದರು.

ಸ್ಮಾರ್ಟ್ ಮೀಟರ್ ಹಗರಣ ಆರೋಪ: ಕೋರ್ಟ್ ತೀರ್ಪಿಗೆ ನಾನು ಬದ್ಧ ಎಂದ ಇಂಧನ ಸಚಿವ ಜಾರ್ಜ್

Leave a Reply

Your email address will not be published. Required fields are marked *