BBMP
Loading ...

E khata

ಬೆಂಗಳೂರಿನಲ್ಲಿ ಇ – ಖಾತಾ ಮಾಡಿಸಿಕೊಂಡರೆ ಆಸ್ತಿದಾರರ ಆಸ್ತಿ ಸಂರಕ್ಷಣೆ ಆಗಲಿದೆ. ಆಸ್ತಿ ಖರೀದಿ ಹಾಗೂ ಆಸ್ತಿ ಮಾರಾಟದ ವೇಳೆ ಅನುಕೂಲವಾಗಲಿದೆ. ಅಲ್ಲದೇ ಅವ್ಯವಹಾರಗಳು ತಪ್ಪಲಿವೆ ಎಂದು ಹೇಳಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಇ – ಖಾತಾ ಮಾಡಿಸಿಕೊಂಡಿದ್ದಾರೆ. ಇದೀಗ ಇ ಖಾತಾ ಮಾಡಿಸಿಕೊಂಡಿರುವ ಕೆಲವು ಆಸ್ತಿದಾರರಿಗೆ ಹೊಸ ಸಂಕಷ್ಟ ಎದುರಾಗಿದೆ. ಆದರೆ ಇದಕ್ಕೆ ಇ – ಖಾತಾ ಮಾತ್ರ ಕಾರಣವಲ್ಲ. ಬೆಂಗಳೂರಿನ ಆಸ್ತಿದಾರರು ಮಾಡಿರುವ ತಪ್ಪೊಂದು ಅವರಿಗೇ ಮುಳುವಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಆಸ್ತಿದಾರರು ಇ ಖಾತಾ ಪಡೆದುಕೊಳ್ಳುವುದಕ್ಕೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಹಲವು ಆಸ್ತಿದಾರರಿಗೆ ಇ ಖಾತಾ ಮಾಡಿಸಿಕೊಂಡಿರುವುದೇ ಸಂಕಷ್ಟವನ್ನು ತಂದೊಡ್ಡಿದೆ. ಹೌದು ಇ ಖಾತಾ ಮಾಡಿಸಿಕೊಳ್ಳುವುದಕ್ಕೆ ಪರದಾಡಿದ್ದ ಆಸ್ತಿದಾರರಿಗೆ ಇದೀಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಹಲವು ಆಸ್ತಿದಾರರು ತಮಗೆ ಇರುವ ಆಸ್ತಿಯನ್ನು ತಪ್ಪಾಗಿ ನಮೂದಿಸಿಕೊಂಡಿರುವುದು ಇದೀಗ ಸಂಕಷ್ಟಕ್ಕೆ ಕಾರಣವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ವಯಂ ಮೌಲ್ಯಮಾಪನ ಯೋಜನೆ (SAS) ಅಡಿಯಲ್ಲಿ ಬೆಂಗಳೂರಿನಲ್ಲಿ ಆಸ್ತಿದಾರರಿಗೆ ತಮ್ಮ ಆಸ್ತಿಯ ವಿಸ್ತೀರ್ಣವನ್ನು ಘೋಷಿಸಿಕೊಳ್ಳುವುದಕ್ಕೆ ಅವಕಾಶ ನೀಡಿತ್ತು. ಆದರೆ, ಈ ಯೋಜನೆಯ ಮೂಲಕ ಹಲವರು ತಪ್ಪಾಗಿ ಆಸ್ತಿ ಘೋಷಣೆ ಮಾಡಿಕೊಂಡಿದ್ದು ಬಿಬಿಎಂಪಿಗೆ ಆಸ್ತಿ ತೆರಿಗೆ ವಂಚನೆ ಮಾಡಿದ್ದಾರೆ.

ಇದೀಗ ಈ ರೀತಿ ಆಸ್ತಿ ತೆರಿಗೆ ವಂಚನೆ ಮಾಡಿರುವವರಿಗೆ ಪಾಠ ಕಲಿಸುವುದಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮುಂದಾಗಿದ್ದಾರೆ. ಇದೀಗ ಇ – ಖಾತಾ ಮಾಡಿಕೊಂಡ ಮೇಲೆ ಈ ಹಿಂದೆ ಆಸ್ತಿದಾರರು ಮಾಡಿದ್ದ ತಪ್ಪುಗಳು ಬಹಿರಂಗವಾಗಿದೆ. ತಮ್ಮ ಆಸ್ತಿ ತೆರಿಗೆಯನ್ನು ಕಡಿಮೆ ಅಥವಾ ತಪ್ಪಾಗಿ ಅಂದಾಜು ಮಾಡಿರುವ ಆಸ್ತಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ವಯಂ ಆಸ್ತಿ ಘೋಷಣೆ ಪ್ರಕ್ರಿಯೆಯಲ್ಲಿ ಲೋಪ ಮಾಡಿಕೊಂಡವರಿಗೆ ಇದೀಗ ತೊಡಕು ಎದುರಾಗಿದೆ. ಇದೀಗ ಈ ರೀತಿ ತಪ್ಪು ಮಾಡಿರುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ನೋಟಿಸ್‌ಗಳನ್ನು ಜಾರಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಪ್ಪು ಮಾಡಿರುವ ಆಸ್ತಿದಾರರು ದುಪ್ಪಟ್ಟು ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ ನಿಖರ ದಂಡದ ಬಗ್ಗೆ ಬಿಬಿಎಂಪಿ ಇನ್ನಷ್ಟೇ ಮಾಹಿತಿ ಹಂಚಿಕೊಳ್ಳಬೇಕಿದೆ.

ತೆರಿಗೆ ಬಾಕಿಯನ್ನು ವಸೂಲಿ ಮಾಡಲು ಇದೀಗ ಬಿಬಿಎಂಪಿ ಮುಂದಾಗಿದೆ. ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಅವ್ಯವಹಾರ ಮತ್ತು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಇ – ಖಾತಾ ಪರಿಚಯಿಸಲಾಗಿದೆ. ಇದೀಗ ಇ – ಖಾತಾ ಮಾಡಿಸಿಕೊಂಡಿರುವವರ ಮೇಲೆ ಬಿಬಿಎಂಪಿ ಕಣ್ಣಿರಿಸಿದೆ. ನಿಮ್ಮ ಆಸ್ತಿ ಸ್ವಯಂ ಮೌಲ್ಯಮಾಪನ ಯೋಜನೆ (SAS) ಐಡಿ ತೆರಿಗೆಗೆ ಘೋಷಿಸಲಾದ ಪ್ರದೇಶ ಹಾಗೂ ಇ-ಖಾತಾದಲ್ಲಿ ನೀಡುರುವ ವಿಸ್ತೀರ್ಣಕ್ಕೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತಿದ್ದಾರೆ.

ಅಲ್ಲದೇ ಮುಂದಿನ 15 ದಿನಗಳ ಒಳಗಾಗಿ ನೀವು ನೋಟಿಸ್‌ಗೆ ನಿಖರವಾದ ಉತ್ತರವನ್ನು ನೀಡದಿದ್ದರೆ, ಮರು-ಮೌಲ್ಯಮಾಪ ಪ್ರಕ್ರಿಯೆ ನಡೆಸಲಾಗುತ್ತದೆ ಹಾಗೂ ಇಲ್ಲಿಯ ವರೆಗಿನ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ನಮೂದಿಸಲಾಗಿದೆ ಎಂದು ವರದಿಯಾಗಿದೆ.

60 ಕೋಟಿ ಆದಾಯ ನಿರೀಕ್ಷೆ: ಇನ್ನು ಈ ರೀತಿ ಆಸ್ತಿಯನ್ನು ತಪ್ಪಾಗಿ ನಮೂದಿಸಿಕೊಂಡಿರುವವರಿಂದ ಬಿಬಿಎಂಪಿಯು ಬರೋಬ್ಬರಿ 60 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವ ನಿರೀಕ್ಷೆ ಇದೆ. 26,000 ಆಸ್ತಿ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ ಎಂದು ಹೇಳಲಾಗಿದೆ.

ಬೆಂಗಳೂರು ಕಾಲ್ತುಳಿತ ಪ್ರಕರಣ: ಆರ್​ಸಿಬಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಂಪುಟ ನಿರ್ಧಾರ

Leave a Reply

Your email address will not be published. Required fields are marked *