BBMP
Loading ...

Dharmasthala

ಮಂಗಳೂರು(ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದಲ್ಲಿ “ಹಲವಾರು ಶವಗಳನ್ನು ಹೂತಿದ್ದೆ” ಎಂಬ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ರಾಜ್ಯ ಸರಕಾರ ಎಸ್ ಐಟಿಗೆ ನೀಡಿರುವ ಸಂಬಂಧ ಇಂದು ಪ್ರಕಟಣೆ ನೀಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರರು, ಸರ್ಕಾರದ ಈ ನಿಲುವು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ವಕ್ತಾರ ಕೆ.ಪಾರ್ಶ್ವನಾಥ್ ಜೈನ್ ಅವರು ಈ ಬಗ್ಗೆ ಪ್ರಕಟಣೆ ನೀಡಿದ್ದು, ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ “ಹಲವಾರು ಶವಗಳನ್ನು ಹೂತಿದ್ದೆ” ಎಂಬ ದೂರು ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂಬ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ.)ಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ ಎಂಬುದು ತಿಳಿದು ಬಂದಿದೆ. ಸರ್ಕಾರದ ಈ ನಿಲುವು ಉತ್ತಮವಾಗಿದೆ. ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ “ಸತ್ಯ”. ಆದ್ದರಿಂದ, ಈ ಪ್ರಕರಣದಲ್ಲಿ ಎಸ್.ಐ.ಟಿ. ತನಿಖಾ ತಂಡ ಸತ್ಯಾಂಶವನ್ನು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

ನಾನು ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಇತ್ತೀಚಿಗೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಎಸ್​ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ 3 ಸದಸ್ಯರ ಎಸ್​ಐಟಿ ರಚಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿಗಳಾದ ಎನ್‌.ಎಂ.ಅನುಚೇತ್, ಸೌಮ್ಯಲತಾ, ಜಿತೇಂದ್ರ ಕುಮಾರ್ ದಯಾಮ ಅವರು ಈ ತನಿಖಾ ತಂಡದಲ್ಲಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸು ಹಾಗೂ ಇದರ ಸಂಬಂಧ ಕರ್ನಾಟಕ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗು ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ ಹಾಗೂ ಐಜಿಪಿಯವರು ಈ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ. ಈ ತನಿಖಾ ತಂಡವು ತನಿಖೆಗೆ ಸಂಬಂಧಿಸಿದ ತನಿಖಾ ಪ್ರಗತಿಯನ್ನು ಡಿಜಿ ಮತ್ತು ಐಜಿಪಿಗೆ ವರದಿ ಮಾಡಬೇಕಿದೆ. ವಿಶೇಷ ತನಿಖಾ ತಂಡವು ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆ ನಡೆಸಿ, ವರದಿಯನ್ನು ಪೊಲೀಸ್ ಮಹಾ ನಿರ್ದೇಶಕರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಧರ್ಮಸ್ಥಳ ರಹಸ್ಯ ಅಂತ್ಯಕ್ರಿಯೆ ಪ್ರಕರಣ: SIT ತನಿಖೆಯಲ್ಲಿ ಸೌಜನ್ಯ ಕೇಸ್ ಸೇರ್ಪಡೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

Leave a Reply

Your email address will not be published. Required fields are marked *