BBMP
Loading ...

ಬೆಂಗಳೂರು: ವಿದೇಶಿ ವಿವಾಹ ಕಾಯ್ದೆಯಡಿ ನೋಂದಣಿಯಾಗದೆ ನಡೆಯುವ ಮದುವೆ ಸಿಂಧುವಾಗಲಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಾಜ್ಯದಲ್ಲಿ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೊಹಮ್ಮದ್‌ ಉಮರ್‌ ಸೀನಿ ಅರೀಫ್‌ ಖಾನ್‌ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್‌ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ತಾಂತ್ರಿಕ ಕಾರಣಗಳಿಂದ ಭಾರತೀಯ ದಂಪತಿಗಳು ವಿದೇಶದಲ್ಲಿ ಮದುವೆ ನೋಂದಣಿ ಮಾಡಿಸದೇ ಇರಬಹುದು. ಆದರೆ ಮದುವೆ ಆಗಿರುವುದಕ್ಕೆ ಛಾಯಾಚಿತ್ರಗಳು, ವಾಸ ಸ್ಥಳದ ವಿವರ ಹಾಗೂ ಜಂಟಿ ಬ್ಯಾಂಕ್‌ ಖಾತೆ ಮತ್ತಿತರವುಗಳ ಆಧಾರದಲ್ಲಿ ಭಾರತೀಯ ಕಾನೂನುಗಳ ಅಡಿಯಲ್ಲಿ ಮದುವೆ ಊರ್ಜಿತವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ದೇಶದಲ್ಲಿ ಆಗಿರುವ ಮದುವೆಯನ್ನು 1969ರ ವಿದೇಶಿ ವಿವಾಹ ಕಾಯ್ದೆಯಡಿ ಮದುವೆಯನ್ನು ನೋಂದಣಿ ಮಾಡಿಕೊಳ್ಳದೇ ಇರಬಹುದು. ಆದರೂ ಅದನ್ನು ವಿವಾಹದ ಫೋಟೋಗಳು ಮತ್ತಿತರ ಅಂಶಗಳನ್ನು ಆಧರಿಸಿ ಮಧ್ಯಂತರ ಉದ್ದೇಶಗಳಿಗಾಗಿ ಭಾರತೀಯ ಕಾನೂನುಗಳಡಿ ಮದುವೆಯನ್ನು ಸಿಂಧು ಎಂದು ಪರಿಗಣಿಸಲಾಗುವುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಮದುವೆ ವಿದೇಶಿ ವಿವಾಹ ಕಾಯ್ದೆಯಡಿ ಎಲ್ಲಾ ತಾಂತ್ರಿಕ ಷರತ್ತುಗಳನ್ನು ಪೂರೈಸುತ್ತದೆಯೋ ಇಲ್ಲವೋ ಎಂಬುದನ್ನು ಆಸ್ತಿ ವ್ಯಾಜ್ಯದ ದಾವೆಯನ್ನು ಅಂತಿಮವಾಗಿ ಇತ್ಯರ್ಥಪಡಿಸುವಾಗ ಪರಿಶೀಲಿಸಬಹುದು. ಆದರೆ ತಾತ್ಕಾಲಿಕ ನಿರ್ಬಂಧ ಆದೇಶಕ್ಕೆ ಎಲ್ಲ ಅಂಶಗಳನ್ನು ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಭಾರತ ದೇಶದ ಹೊರ ಭಾಗದಲ್ಲಿ ಭಾರತೀಯ ಪ್ರಜೆಗಳು ಮಾಡಿಕೊಂಡಿರುವ ಮದುವೆಗಳನ್ನು ದೃಢೀಕರಿಸಲು ವಿದೇಶಿ ವಿವಾಹ ಕಾಯ್ದೆ 1969ನ್ನು ಜಾರಿಗೊಳಿಸಲಾಗಿದೆ. ಅದರಡಿ ಹೇಗೆ ಅಂತಹ ಮದುವೆಗಳನ್ನು ಮಾಡುವುದು ಮತ್ತು ಅವುಗಳಿಗೆ ಕಾನೂನಿನ ಪ್ರಕಾರ ಹೇಗೆ ಮಾನ್ಯತೆ ನೀಡಬಹುದು ಎಂದು ವಿವರಿಸಲಾಗಿದೆ. ಮೊದಲಿಗೆ ಭಾರತದ ಯಾವುದೇ ಪ್ರಜೆ ವಿದೇಶದಲ್ಲಿ ಮದುವೆ ಆಗಬೇಕಾದರೆ, ಆತ ಭಾರತ ಸರ್ಕಾರ ಅಂತಹ ದೇಶಕ್ಕೆ ನೇಮಿಸಿರುವ ವಿವಾಹ ಅಧಿಕಾರಿ (ಮ್ಯಾರೇಜ್‌ ಆಫೀಸರ್‌)ಅವರ ಸಮಕ್ಷಮದಲ್ಲಿ ಮದುವೆ ನಡೆಯಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಜತೆಗೆ, ಕಾಯ್ದೆಯ ಪ್ರಕಾರ ಉದ್ದೇಶಿತ ಮದುವೆಗೆ ಕೆಲವು ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗುತ್ತದೆ. ಅಧಿಕಾರಿ ಮದುವೆಯನ್ನು ಪರಿಶೀಲಿಸಬೇಕಾಗುತ್ತದೆ ಮತ್ತು ಕಾಯ್ದೆಯಡಿ ನೋಂದಣಿ ಮಾಡಿಸಬೇಕಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗುತ್ತದೆ, ಅನಂತರ ವಿವಾಹ ಅಧಿಕಾರಿ ಮದುವೆ ಆಗಿರುವುದನ್ನು ದೃಢಪಡಿಸುವ ಸರ್ಟಿಫಿಕೇಟ್‌ ಅನ್ನು ನೀಡಲಿದ್ದಾರೆ. ಅದು ಭಾರತೀಯ ಕಾನೂನುಗಳಡಿ ಮಾನ್ಯತೆ ಹೊಂದಿರಲಿದೆ ಎಂದು ಕೋರ್ಟ್​ ಹೇಳಿದೆ.

ಅರ್ಜಿದಾರ ಮೊಹಮ್ಮದ್‌ ಉಮರ್‌ ಸೀನಿ ಅರೀಫ್‌ ಖಾನ್‌ ಮತ್ತು ತಾಂಜಿಯಾ ಬಾನು ನಡುವೆ ಆಸ್ತಿ ವ್ಯಾಜ್ಯ ಎದುರಾಗಿತ್ತು. ವಿದೇಶಿ ವಿವಾಹ ಕಾಯ್ದೆ ವಿಚಾರದಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಪೀಠ, ಈ ಆದೇಶ ನೀಡಿದೆ.

ಅಂಧರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಒಂದೇ ಪಾಸ್‌ನಲ್ಲಿ 4 ನಿಗಮಗಳ ಬಸ್‌ನಲ್ಲಿ ಒಡಾಟಕ್ಕೆ ಅವಕಾಶ

Leave a Reply

Your email address will not be published. Required fields are marked *