ಬೆಂಗಳೂರು: ಅಗ್ನಿಶಾಮಕ ಇಲಾಖೆ ನೀಡುವ ಅಗ್ನಿ ಸುರಕ್ಷತಾ ನಿರಾಕ್ಷೇಪಣ ಪತ್ರ (ಎನ್ಒಸಿ) ಇಲ್ಲದೆ ವಿದ್ಯುತ್ ಸಂಪರ್ಕ ಕೊಟ್ಟಿದ್ದಾದರೂ ಹೇಗೆ? ಪ್ರಭಾವಿಗಳು ಹೇಳಿದರು ಎಂದ ಕೂಡಲೇ ಸಂಪರ್ಕ ನೀಡಿರುವುದನ್ನು ಒಪ್ಪಲಾಗದು…!
ಎನ್ಒಸಿ ಇಲ್ಲದಿದ್ದರೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ಗೆ (ಕೆಎಸ್ಸಿಎ) ವಿದ್ಯುತ್ ಸಂಪರ್ಕ ನೀಡಿದ ಬೆಸ್ಕಾಂಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿಯಿದು… ವಿದ್ಯುತ್ ಸಂಪರ್ಕ ಕಡಿತ ಸಂಬಂಧ ಬೆಸ್ಕಾಂ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಕೆಎಸ್ಸಿಎ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಬೆಸ್ಕಾಂನಿಂದ ನೋಟಿಸ್ ಪಡೆದ ಬಳಿಕ ಪರಿಹಾರಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು. ಜೂ.12ಕ್ಕೆ ಬೆಸ್ಕಾಂನಿಂದ ನೋಟಿಸ್ ಕೊಟ್ಟು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಜೂ.17ಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದೇ ದಿನ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ತಿಳಿಸಿದರು. ಈ ವಿಚಾರ ಗಮನಿಸಿದ ನ್ಯಾಯಾಲಯ, ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತದ ನೋಟಿಸ್ ಕೊಟ್ಟು, ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು. ಅಗ್ನಿಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡಿಲ್ಲ ಎಂದು ಗೊತ್ತಿದ್ದರೂ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಹೇಗೆ? ಈ ವಿಚಾರದಲ್ಲಿ ಬೆಸ್ಕಾಂ ಸಂಸ್ಥೆಯನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿತು.
ಕ್ರಿಕೆಟ್ ಅಸೋಸಿಯೇಷನ್ ಮನವಿ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಬೇಕಿದ್ದರೆ ಪುನಃ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ಪರ ವಕೀಲರು ತಿಳಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಪೀಠ, ಈಗಾಗಲೇ ಆಗಿರುವ ಅನಾಹುತವೇ ಸಾಕಷ್ಟಿದೆ. ಮುಂದೆ ದುರ್ಘಟನೆ ಸಂಭವಿಸಿದರೆ ಯಾರು ಹೊಣೆ? ಪ್ರಭಾವಿಗಳು ಹೇಳಿದ್ದಾರೆ ಎಂದಾಕ್ಷಣ ಸಂಪರ್ಕ ನೀಡಿದರೆ ಕೋರ್ಟ್ ಸಹಿಸುವುದಿಲ್ಲ ಎಂದು ಬೆಸ್ಕಾಂ ವಿರುದ್ಧ ಕಟುವಾಗಿ ನುಡಿಯಿತು.
ಬಲವಂತದ ಕ್ರಮ ಕೈಗೊಳ್ಳದಂತೆ ಬೆಸ್ಕಾಂ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೂಚಿಸಬೇಕು ಎಂದು ಕ್ರಿಕೆಟ್ ಅಸೋಸಿಯೇಷನ್ ಪರ ವಕೀಲರು ಮನವಿ ಮಾಡಿದರು. ಈ ವಿಚಾರದಲ್ಲಿ ಏನನ್ನೂ ಹೇಳುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಪರ ವಕೀಲರು ಮೌಖಿಕ ಭರವಸೆ ನೀಡಿದರು. ಮೊದಲು ಸರ್ಕಾರವನ್ನು ಕೇಳಿ, ಒಂದೊಮ್ಮೆ ಸರ್ಕಾರ ಹೇಳಿದರೆ ಆಯಿತು. ಇಲ್ಲದಿದ್ದರೆ ಆಗಿರುವ ತಪ್ಪಿಗೆ ನಿಮ್ಮನ್ನೇ (ಬೆಸ್ಕಾಂ) ಹೊಣೆ ಮಾಡಲಾಗುವುದು ಎಂದು ಮತ್ತೊಮ್ಮೆ ನ್ಯಾಯಪೀಠ ಹೇಳಿತು.
ವಾದ-ಪ್ರತಿವಾದದ ಬಳಿಕ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠವು ವಿಚಾರಣೆಯನ್ನು ಜು.15ಕ್ಕೆ ಮುಂದೂಡಿತು.
ನಾನು, ಡಿಕೆಶಿ ಚೆನ್ನಾಗೆ ಇದ್ದೇವೆ.. ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಭದ್ರವಾಗಿರುತ್ತೆ: ಸಿಎಂ ಸಿದ್ದರಾಮಯ್ಯ ಹೇಳಿಕೆ


