ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್ಸಿ) ಮಾರ್ಗಸೂಚಿ ಅನ್ವಯ ಬೆಸ್ಕಾಂ ಆದೇಶ ಹೊರಡಿಸಿದೆ. 2025ರ ಫೆ.15ರಿಂದ ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ಸೇರಿ ಎಲ್ಲಾ ನಗರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭಗೊಂಡಿದೆ. ಇದೀಗ ಗ್ರಾಮೀಣ ಪ್ರದೇಶಗಳಿಗೂ ಯೋಜನೆ ವಿಸ್ತರಿಸಲಾಗಿದೆ.
ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಗ್ರಾಹಕರು ಅರ್ಜಿ ಸಲ್ಲಿಸಿ, ಬೆಸ್ಕಾಂನ ನೋಂದಾಯಿತ ಮಳಿಗೆಗಳಿಂದ ಸ್ಮಾರ್ಟ್ ಮೀಟರ್ಗಳನ್ನು ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬಹುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು 2024ರ ಮಾರ್ಚ್ 6ರಂದು ಕೆಇಆರ್ಸಿ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ, ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗಿದೆ.
ಸ್ಮಾರ್ಟ್ ಮೀಟರ್ ವೈಶಿಷ್ಟ್ಯಗಳೇನು?
* ಸ್ಮಾರ್ಟ್ ಮೀಟರ್ಗಳು ಜಿಪಿಆರ್ಎಸ್/ ಆರ್ಎಫ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತವೆ.
* ಅಡ್ವಾನ್ಸ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಟರ್ (ಎಎಂಐ) ತಂತ್ರಜ್ಞಾನದ ಸ್ಮಾರ್ಟ್ ಮೀಟರ್ಗಳು, ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಬೆಸ್ಕಾಂ ನಡುವೆ ನೇರ ಸಂಪರ್ಕ ಕಲ್ಪಿಸಲಿವೆ.
* ಮೊಬೈಲ್ ಅಪ್ಲಿಕೇಷನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ವೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ.
* ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರೀಜಾರ್ಜ್ ಮಾಡಿಕೊಳ್ಳಬಹುದು.
* ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದು.
* ಈ ಎಲ್ಲಾ ಕಾರಣಗಳಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.


