BBMP
Loading ...

Kempegowd

ಬೆಂಗಳೂರು: ಇಂದು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ನಾಯಕ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ. ನಾಡಿನಾದ್ಯಂತ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಗಣ್ಯರು ಶುಭಾಶಯ ಕೋರಿದ್ದಾರೆ.

ನಾಡಿನ ಸಮಸ್ತ ಜನತೆಗೆ, ಜಗತ್ತಿನೆಲ್ಲೆಡೆ ನೆಲೆಸಿರುವ ಎಲ್ಲಾ ಕನ್ನಡಿಗರೆಲ್ಲರಿಗೂ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು. ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ ಮತ್ತು ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ ಎಂಬುದನ್ನು ಅನುಕ್ಷಣವೂ ಸ್ಮರಿಸೋಣ. ಅಭಿವೃದ್ಧಿ, ನೆಮ್ಮದಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ದೂರದೃಷ್ಟಿಯ ಹಾದಿ ನಮಗೆಲ್ಲರಿಗೂ ಮಾದರಿ, ಪ್ರೇರಣೆ. ವಿಜ್ಞಾನ, ತಂತ್ರಜ್ಞಾನ, ಅವಿಷ್ಕಾರ, ಕೈಗಾರಿಕೆ, ಉದ್ಯೋಗಾವಕಾಶ ಸೇರಿ ಅನೇಕ ರೀತಿಯಲ್ಲಿ ಜಗತ್ತಿನ ಮುಂಚೂಣಿ ನಗರವಾಗಿರುವ ಬೆಂಗಳೂರಿನ ಭವ್ಯ ಪರಂಪರೆಯನ್ನು ಮುಂದುವರಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

ಯುಗಪುರುಷ ನಾಡಪ್ರಭು ಕೆಂಪೇಗೌಡರು ನಮಗೆಲ್ಲಾ ಆದರ್ಶ! ಧರ್ಮವೀರ, ಸಾವಿರ ಕೆರೆಗಳ ಸರದಾರ, ಬೆಂಗಳೂರೆಂಬ ಮಹಾನಗರಿಯನ್ನು ವಿಜಯನಗರ ಸಾಮ್ರಾಜ್ಯದಂತೆ ಸಂಪದ್ಭರಿತವಾಗಿ ನಿರ್ಮಿಸಲು ಪಣ ತೊಟ್ಟ ದಾರ್ಶನಿಕ, ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಶುಭಾಶಯಗಳು. ಕೆಂಪೇಗೌಡರ ದಕ್ಷ ಆಡಳಿತ ಹಾಗೂ ಅಭಿವೃದ್ಧಿ ಮಾದರಿಯು ಸದಾ ನಮ್ಮ ಸರ್ಕಾರಕ್ಕೆ ಸ್ಫೂರ್ತಿಯಾಗಿದೆ. ಬೆಂಗಳೂರನ್ನು ವ್ಯಾಪಾರೋದ್ಯಮಗಳ ಕೇಂದ್ರವಾಗಿ, ಸರ್ವಜನಾಂಗದ ಶಾಂತಿಯ ತೋಟವಾಗಿ, ಜಲಸಮೃದ್ಧ ನಗರವಾಗಿ ನಿರ್ಮಿಸಿದ ಆ ಮಹಾನ್‌ ಚೇತನಕ್ಕೆ ಸಾವಿರದ ಶರಣು. ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು ಎಂದು ಡಿಸಿಎಂ ಡಿಕೆ ಶಿವಕುಮಾರ್​ ಶುಭ ಕೋರಿದ್ದಾರೆ.

ನಾಡಿನ ಸಮಸ್ತ ಜನತೆಗೆ ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ 516ನೇ ಜಯಂತ್ಯುತ್ಸವದ ಶುಭಾಶಯಗಳು. ಕರ್ನಾಟಕದ ರಾಜಧಾನಿಯಾಗಿ, ಉದ್ಯಾನ ನಗರಿಯಾಗಿ ಅಗಾಧವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಜನಪ್ರಿಯ ನಗರಗಳ ಪೈಕಿ ಬೆಂಗಳೂರು ಗುರುತಿಸಿಕೊಂಡಿರುವುದು ಕೆಂಪೇಗೌಡರ ದೂರದೃಷ್ಟಿಯ ಪ್ರತಿಫಲವಾಗಿದೆ. ಸರ್ವ ಜನರ ಏಳಿಗೆಗಾಗಿ ಶ್ರಮಿಸಿದ ಶ್ರೇಷ್ಠ ದಾರ್ಶನಿಕ, ತಮ್ಮ ಸಮಾಜಮುಖಿ ವ್ಯಕ್ತಿತ್ವದಿಂದಾಗಿ ಇತಿಹಾಸ ಪುಟದಲ್ಲಿ ಅಜರಾಮರವಾಗಿ ಉಳಿದಿರುವ ಕೆಂಪೇಗೌಡರನ್ನು ಈ ಸಂದರ್ಭದಲ್ಲಿ ಕೃತಜ್ಞಪೂರ್ವಕವಾಗಿ ಗೌರವದಿಂದ ಸ್ಮರಿಸೋಣ ಎಂದು ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ ಅವರು ಶುಭಾಶಯ ಕೋರಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು. ತಮ್ಮ ದೂರದೃಷ್ಟಿಯಿಂದ ಸುಂದರ, ಸುಸಜ್ಜಿತ ನಗರವಾಗಿ ನಿರ್ಮಾಣಗೊಂಡ ಬೆಂಗಳೂರು ನಗರ ಇಂದು ರಾಜ್ಯ ರಾಜದಾನಿಯಾಗಿ, ಉದ್ಯಾನ ನಗರವಾಗಿ, ಸಿಲಿಕಾನ್ ಸಿಟಿಯಾಗಿ ವಿಶ್ವ ಮನ್ನಣೆ ಗಳಿಸಿದೆ. ಇಂತಹ ಭದ್ರ ಅಡಿಪಾಯ ಹಾಕಿದ ನಾಡಪ್ರಭುವಿಗೆ ನಮನಗಳನ್ನು ಸಲ್ಲಿಸೋಣ ಎಂದು ಪ್ರತಿಪಕ್ಷದ ನಾಯಕ ಆರ್​. ಅಶೋಕ ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *