BBMP
Loading ...

B Khata

ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ಬಿ ಖಾತಾ ಆಸ್ತಿಗಳಿಗೆ ಕೆಲವು ನಿರ್ದಿಷ್ಟ ಸೌಲಭ್ಯಗಳನ್ನು ನೀಡುವುದಾಗಿ ಹೇಳಿತ್ತು. ಆದರೆ, ಇದು ಸಿಗದೆ ಬಿ ಖಾತಾ ಪಡೆದುಕೊಂಡಿರುವವರು ಪರದಾಡುವಂತೆ ಆಗಿದೆ. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಬಿ ಖಾತಾ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯದಾದ್ಯಂತ ಎಲ್ಲಾ ಅನಧಿಕೃತ ಹಾಗೂ ಅಕ್ರಮ ಆಸ್ತಿಗಳಿಗೆ ಒಂದು ಬಾರಿ ಬಿ ಖಾತಾ ನೀಡುವ ಅವಕಾಶವನ್ನು ಮೊದಲು ಸರ್ಕಾರವು ಮೂರು ತಿಂಗಳ ಅವಧಿಗೆ ನೀಡಿತ್ತು. ಇದೀಗ ಇನ್ನೂ ಮೂರು ತಿಂಗಳ ಅವಧಿಗೆ ಬಿ ಖಾತಾ ನೀಡುವುದನ್ನು ವಿಸ್ತರಿಸಲಾಗಿದೆ. ಆದರೆ ಇದೀಗ ಬಿ ಖಾತಾ ಆಸ್ತಿದಾರರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಬಿ ಖಾತಾ ಇದ್ದರೂ ಯಾವುದೇ ಕಟ್ಟಡ ನಿರ್ಮಾಣ, ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಾವ ವಿಷಯಗಳಿಗೆ ಬಿ ಖಾತಾ ಸಮಸ್ಯೆ ಆಗುತ್ತಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅಕ್ರಮ ಆಸ್ತಿದಾರರಿಗೆ ಒಂದು ಬಾರಿಯ ಅವಕಾಶದ ಮೂಲಕ ಬಿ ಖಾತಾ ನೀಡುತ್ತಿದೆ. ಎಲ್ಲಾ ಆಸ್ತಿ ತೆರಿಗೆ ಹಾಗೂ ಶುಲ್ಕವನ್ನು ಪಾವತಿಸಿಕೊಂಡು ಬಿ ಖಾತಾ ನೀಡಲಾಗುತ್ತಿದೆ. ಆದರೆ, ಆಸ್ತಿ ತೆರಿಗೆ ಪಾವತಿಸಿಕೊಂಡರೂ ಬಿ ಖಾತಾ ಆಸ್ತಿದಾರರಿಗೆ ಸೌಲಭ್ಯ ನೀಡದೆ ಇರುವುದು ಅಥವಾ ಗೊಂದಲಗಳು ಮುಂದುವರಿದಿರುವುದು ಬಿ ಖಾತಾ ಆಸ್ತಿದಾರರನ್ನು ಸಂಕಷ್ಟಕ್ಕೆ ದೂಡಿದೆ.

ರಾಜ್ಯದಾದ್ಯಂತ ಕರ್ನಾಟಕ ಸರ್ಕಾರವು ಬಿ ಖಾತಾ ಅಭಿಯಾನವನ್ನೇ ಪ್ರಾರಂಭಿಸಿದೆ. ಒಂದು ಬಾರಿ ಎಲ್ಲಾ ಅನಧಿಕೃತ ಹಾಗೂ ರೆವಿನ್ಯೂ ಪ್ರಾಪರ್ಟಿಗಳಿಗೆ ಬಿ ಖಾತಾ ನೀಡಲಾಗುತ್ತಿದೆ. ಆದರೆ ಇಲ್ಲಿಯ ವರೆಗೂ ಬಿ – ಖಾತಾದಲ್ಲಿ ಇರುವ ಗೊಂದಲಗಳನ್ನು ಪರಿಹರಿಸಿಲ್ಲ ಎನ್ನುವ ಆರೋಪವು ಕೆಲವು ಆಸ್ತಿದಾರರಿಂದ ಕೇಳಿ ಬಂದಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಬಿ ಖಾತಾ ಹೊಂದಿರುವ ಆಸ್ತಿದಾರರಿಗೆ ಕೆಲವೊಂದು ನಿರ್ದಿಷ್ಟ ನಿರ್ಬಂಧಗಳನ್ನು ವಿಧಿಸಿದೆ.

ಕಟ್ಟಡ ನಕ್ಷೆ ಮಂಜೂರಾತಿ ಸಮಸ್ಯೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಅನಧಿಕೃತ ಹಾಗೂ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವು ಮಾಡುವ ಬೃಹತ್ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದೀಗ ಇದರ ಭಾಗವಾಗಿ ಯಲಹಂಕದಲ್ಲಿ ಅಭಿಯಾನ ನಡೆದಿದೆ. ಇನ್ನು ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿದಾರರಿಗೆ ಕಟ್ಟಡ ನಕ್ಷೆ ಮಂಜೂರಾತಿಯನ್ನು ನೀಡುತ್ತಿಲ್ಲ.‌ ಕಟ್ಟಡ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿದರೆ ಆ ಕಟ್ಟಡಗಳನ್ನು ಕೆಡವಲಾಗುತ್ತಿದೆ. ಇದು ಭಾರೀ ಗೊಂದಲಕ್ಕೆ ಕಾರಣವಾಗಿದೆ.

ಲಕ್ಷಾಂತರ ರೂಪಾಯಿ ಹಣ ಕೊಟ್ಟು ಆಸ್ತಿ ಖರೀದಿ ಮಾಡಿದ್ದು ಅದಕ್ಕೆ ಸರ್ಕಾರಕ್ಕೆ ಬಿ ಖಾತಾ ಪಡೆದುಕೊಳ್ಳಲು ಹಾಗೂ ಆಸ್ತಿ ತೆರಿಗೆ ಶುಲ್ಕ ಪಾವತಿ ಮಾಡಿದ ಮೇಲೆಯೂ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಕ್ಷೆ ಮಂಜೂರಾತಿ ಸಿಗದೆ ಇರುವುದು ಆಸ್ತಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಒಳಚರಂಡಿ ಹಾಗೂ ನೀರು ಸರಬರಾಜು ಸಂಪರ್ಕ ಪಡೆದುಕೊಳ್ಳುವುದಕ್ಕೂ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *