ತುಮಕೂರು: ಕಾರ್ಯಕ್ರಮವೊಂದರಲ್ಲಿ ಎಣ್ಣೆ ಏಟಿನಲ್ಲಿದ್ದ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ಎಸ್‌ಪಿಗೆ ದೂರು ನೀಡಿದ್ದಾರೆ.
ಹೌದು, ತುಮಕೂರಿನ ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಆರ್.ರಾಜೇಂದ್ರನ್ ಮೇಲೆ ಅಸಭ್ಯ ವರ್ತನೆ, ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬಂದಿದೆ. ಡೆಪ್ಯೂಟಿ ಕಮಾಂಡೆಂಟ್ ರಾಜೇಂದ್ರನ್ ಗೃಹರಕ್ಷಕಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಹೇಗೆ ನಮ್ಮ ರಕ್ಷಣೆ ಮಾಡ್ತಾರೋ ಅದೇ ರೀತಿ ಗೃಹರಕ್ಷಕ ಇಲಾಖೆ ಕೂಡ ಸಾರ್ವಜನಿಕರ ರಕ್ಷಣೆಯ ಕೆಲಸ ಮಾಡುತ್ತದೆ. ಹೀಗಾಗಿ ಗೃಹರಕ್ಷಕ ದಳದ ಸಿಬ್ಬಂದಿಯ ಮೇಲೂ ಸಾರ್ವಜನಿಕರಿಗೆ ಅಷ್ಟೇ ಗೌರವ ಇದೆ. ಆದ್ರೆ ಈ ಇಲಾಖೆಯ ಪ್ರಮುಖ ಹುದ್ದೆಯಲ್ಲಿರೋ ಅಧಿಕಾರಿಯ ವಿರುದ್ಧವೇ ಇದೀಗ ಗಂಭೀರ ಆರೋಪ ಕೇಳಿಬಂದಿದೆ.
ಏನಿದು ಪ್ರಕರಣ?
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ಕಳೆದ ಏ. 24ರಿಂದ ಮೇ 3ರವರೆಗೆ ಗೃಹರಕ್ಷಕ ದಳದ ಸಿಬ್ಬಂದಿಗೆ ತರಬೇತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. ಈ ಕ್ಯಾಂಪ್ ವೇಳೆ ಏ. 26ರಂದು ರಾತ್ರಿ 9.50ರಿಂದ 10 ಗಂಟೆಯ ಸುಮಾರಿಗೆ ತರಬೇತಿಗೆ ಬಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನ ಅಲ್ಲಿದ್ದವರು ಮೇಲಧಿಕಾರಿಗಳಿಗೆ ತಿಳಿಸಿದ್ದರು.
ಈ ವೇಳೆ ಅಲ್ಲೇ ಇದ್ದ ಡೆಪ್ಯೂಟಿ ಕಮಾಂಡೆಂಟ್ ಆರ್.ರಾಜೇಂದ್ರನ್, ಸಾಕಷ್ಟು ಮಹಿಳಾ ಸಿಬ್ಬಂದಿ ಇದ್ದರೂ ಕೂಡ ಅವರಿಗೆ ಪ್ರಥಮ ಚಿಕಿತ್ಸೆ ಮಾಡಲು ಬಿಡದೇ, ಕುಡಿದ ಮತ್ತಿನಲ್ಲಿ ತಾನೇ ಪ್ರಥಮ ಚಿಕಿತ್ಸೆ ಮಾಡುವ ನೆಪದಲ್ಲಿ ಮಹಿಳೆಯ ಅಂಗಾಂಗಗಳನ್ನು ಮುಟ್ಟಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾರನೇ ದಿನ ತರಬೇತಿ ವೇಳೆ ಕಾಲ್ನಡಿಗೆಯಲ್ಲಿ ಸಿದ್ದರಬೆಟ್ಟ ಹತ್ತುವಾಗ ಮತ್ತೋರ್ವ ಗೃಹರಕ್ಷಕಿಯೊಂದಿಗೂ ಇದೇ ರೀತಿಯಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಡೆಪ್ಯೂಟಿ ಕಮಾಂಡೆಂಟ್ ಅವರಿಗೆ ಟ್ರೈನಿಂಗ್ ಕ್ಯಾಂಪ್ ವೇಳೆ ಉಳಿದುಕೊಳ್ಳಲು ಅತಿಥಿ ಗೃಹದ ವ್ಯವಸ್ಥೆ ಮಾಡಿದ್ದರೂ ಸಹ ಮಹಿಳಾ ಗೃಹರಕ್ಷಕಿಯರ ವಾಸ್ತವ್ಯಕ್ಕೆ ನೀಡಿದ್ದ ಕೊಠಡಿಗಳ ಬಳಿ ಇದ್ದ ಒಂದು ಕೊಠಡಿಯಲ್ಲಿ ಒಬ್ಬರೇ ಉಳಿದುಕೊಂಡಿದ್ದರು. ದಿನ ರಾತ್ರಿ ಅವರ ಕೊಠಡಿಯಲ್ಲಿ ಕೆಲವು ಅಧಿಕಾರಿಗಳು ಸೇರಿಕೊಂಡು ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.
ಆರ್.ರಾಜೇಂದ್ರನ್ ತುಮಕೂರಿಗೆ ಬರುವ ಮುಂಚೆ ಕೋಲಾರದಲ್ಲಿ ಕಾರ್ಯನಿರ್ವಹಿಸುವಾಗ ಗೃಹರಕ್ಷಕ ದಳದ ಸಿಬ್ಬಂದಿಗೆ ಬೆಂಗಳೂರಿನ ಹಲಸೂರು ಮೆಟ್ರೋ ಸ್ಟೇಷನ್‌ನಲ್ಲಿ ಡ್ಯೂಟಿ ಹಾಕಿಸಿಕೊಡುತ್ತೇನೆ ಎಂದು ಹೇಳಿ 6000 ರೂ. ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಅಲ್ಲದೇ ಕರ್ತವ್ಯ ಲೋಪದ ಮೇಲೆ ಹಲವಾರು ಬಾರಿ ವರ್ಗಾವಣೆ, ಅಮಾನತುಗೊಂಡಿದ್ದರು ಎನ್ನಲಾಗಿದೆ. ಇದೀಗ ಈ ಡೆಪ್ಯುಟಿ ಕಮಾಂಡೆಂಟ್ ವರ್ತನೆಯಿಂದ ಇಡೀ ಗೃಹರಕ್ಷಕ ದಳ ತಲೆತಗ್ಗಿಸುವಂತಾಗಿದೆ.
ವೇಶ್ಯಾವಾಟಿಕೆ ಪ್ರಕರಣ ದಾಖಲಿಸದೇ ಇರಲು 1.20 ಲಕ್ಷ ರೂ. ಲಂಚ: ಕಾಡುಗೋಡಿ ಠಾಣೆಯ ಪಿಎಸ್‌ಐ ಬಂಧನ


