ಬೆಂಗಳೂರು: ಬಿಬಿಎಂಪಿ ಅನ್ನು ತೆಗೆದುಹಾಕಿ ಗ್ರೇಟರ್ ಬೆಂಗಳೂರು ಎಂದು ಸರ್ಕಾರ ಮರುನಾಮಕರಣ ಮಾಡಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಗ್ರೇಟರ್ ಬೆಂಗಳೂರು ಬದಲು ಕನ್ನಡಿಗರ ಬೆಂಗಳೂರು ಎಂದು ಹೆಸರಿಡುವಂತೆ ಲೇಖಕರು ಹಾಗೂ ಕನ್ನಡಪರ ಚಿಂತಕರಾದ ಚನ್ನೇಗೌಡ ಉಜ್ಜನಿ ಚಲುವಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ ಕೆ ಶಿವಕುಮಾರ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ದೇವಿ ನಿಮ್ಮೆಲ್ಲ ಇಷ್ಟಾರ್ಥಗಳನ್ನು ನೆರವೇರಿಸಲಿ. ಮಾನ್ಯ ಉಪಮುಖ್ಯಮಂತ್ರಿಗಳೇ ನೀವು ಇಂದಿನಿಂದ ಮಾಡಲು ಹೊರಟಿರುವ ಗ್ರೇಟರ್ ಬೆಂಗಳೂರು ಹೆಸರಿನ ಬದಲು ಕನ್ನಡಿಗರ ನೆಲವಾದ ಈ ಸುಂದರ ಬೆಂಗಳೂರು ಮುಂದೆಯೂ ಕನ್ನಡಿಗರ ನೆಲವಾಗಿಯೇ ಉಳಿಯಲು ಕನ್ನಡಿಗರ ಬೆಂಗಳೂರು ಎಂಬುದಾಗಿ ಹೆಸರಿಡಲು ನಿಮ್ಮಲ್ಲಿ ವಿನಮ್ರ ಮನವಿ.
ಮುಂದೊಂದು ದಿನ ನಿಮ್ಮ ಈ ನಿರ್ಧಾರದಿಂದ ಇಡೀ ಕನ್ನಡ ಕುಲವೇ ನಿಮ್ಮನ್ನು ಗೌರವಿಸುತ್ತದೆ. ದಯಮಾಡಿ ನಿಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಕನ್ನಡಿಗರ ಬೆಂಗಳೂರು ಎಂಬ ಈ ಮಾತು ಜಾರಿಗೆ ಬರಲಿ. ದಯವಿಟ್ಟು ಈ ಮೇಲ್ಕಂಡ ಮನವಿಗೆ ಬೆಂಗಳೂರು ಅಭಿವೃದ್ಧಿ ಸಚಿವರು, ಶಾಸಕರುಗಳು, ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ರವರು, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕರು, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತರು, ಕನ್ನಡ ಪತ್ರಿಕಾ ಬಳಗ , ಸುದ್ದಿವಾಹಿನಿಯವರು, ಸಾಹಿತಿಗಳು, ಬುದ್ದಿಜೀವಿಗಳು, ಗೌರವನ್ವಿತರು ನೀವೆಲ್ಲರೂ ಈ ಮೇಲ್ಕಂಡ ಹೆಸರನ್ನು ಬೇಕೇ ಬೇಕು ಎಂಬುದಾಗಿ ತಿಳಿಸಿ ಸಹಕಾರ ಹಾಗೂ ಬೆಂಬಲ ನೀಡುವ ಮೂಲಕ ಈ ನೆಲದ ಘನತೆಯನ್ನು ನಾವೆಲ್ಲರೂ ಉಳಿಸೋಣ ಈ ನೆಲದ ಸಂಸ್ಕೃತಿ, ಭಾಷೆ, ನೆಲ -ಜಲ, ಉಳಿಸುವ ಕಾರ್ಯದಲ್ಲಿ ನಾವೆಲ್ಲರೂ ಮುಂದೆ ನಿಲ್ಲೋಣ ಎಂದು ಚನ್ನೇಗೌಡ ಉಜ್ಜನಿ ಚಲುವಯ್ಯ ಅವರು ಕರೆ ನೀಡಿದ್ದಾರೆ.
ಬಿಬಿಎಂಪಿ ಯುಗ ಅಂತ್ಯ; ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ!


