ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವ ಜಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಅತ್ಯಂತ ಕಡಿಮೆ ದುಡ್ಡು ಸಿಗುವ ಆತಂಕ ಶುರುವಾಗಿದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾರ್ಟ್ ಲಿಸ್ಟ್ ಆಗಿರುವ ಜಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಭೂಮಿ ಬೆಲೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ವಿಮಾನ ನಿಲ್ದಾಣಕ್ಕೆ ಜಾಗ ನೀಡಿದರೆ, ಭೂಮಿಯನ್ನು ಕಳೆದುಕೊಂಡು & ಅದಕ್ಕೆ ತಕ್ಕಂತೆ ಬೆಲೆಯೂ ಬರುವುದಿಲ್ಲ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಹಲವು ಗೊಂದಗಳು ಮುಂದುವರಿದಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಕರ್ನಾಟಕ ಸರ್ಕಾರವು ಐದು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದೆಯಾದರೂ ಯಾವುದೇ ಜಾಗವೂ ಇಲ್ಲಿಯ ವರೆಗೆ ಅಂತಿಮವಾಗಿಲ್ಲ. ಆದರೆ, ನಿರ್ಮಾಣಕ್ಕೆ ನಿಗದಿ ಮಾಡಿರುವ ಪ್ರತಿ ಶಾರ್ಟ್ ಲಿಸ್ಟ್ ಜಾಗದಲ್ಲೂ ಹೊಸ ಹೊಸ ಸಮಸ್ಯೆಗಳು ಹಾಗೂ ಲೆಕ್ಕಾಚಾರಗಳು ಜೋರಾಗಿವೆ. ಇದಕ್ಕೆ ಬೆಂಗಳೂರಿನ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ / ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂದರ್ಭದಲ್ಲಿ ಆಗಿರುವ ವಿಷಯಗಳೂ ಕಾರಣ ಎನ್ನಲಾಗುತ್ತಿದೆ.
ಬೆಂಗಳೂರಿನ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಂದರ್ಭದಲ್ಲಿ ಕೆಲವು ರೈತರಿಗೆ ಹಾಗೂ ಆಸ್ತಿದಾರರಿಗೆ ಭೂಮಿಯ ಬೆಲೆಗೆ ನಿಖರವಾದ ದುಡ್ಡನ್ನು ಕೊಟ್ಟಿಲ್ಲ. ಅಲ್ಲದೇ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡು ಹಲವು ರೈತರು ವಾಚ್ಮ್ಯಾನ್ನಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಕೇವಲ 15 ಲಕ್ಷ ಕೊಟ್ಟರೆ ರೈತರು ಏನು ಮಾಡಬೇಕು ಎನ್ನುವ ಚರ್ಚೆ ಶುರುವಾಗಿದೆ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿರುವ ಮಾಗಡಿಯ ಚಿಕ್ಕಸೋಲೂರಿನಲ್ಲಿ ರೈತರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಭಾಗದ ಸಾವಿರಾರು ರೈತರು ಇಲ್ಲಿನ ಮಾರಮ್ಮ ದೇವಾಲಯದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಹೋರಾಟದ ಮೂಲಕ ಭೂಮಿ ಉಳಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.
15 ಲಕ್ಷ ಸಾಕಾಗಲ್ಲ: ಇನ್ನು ಈ ಭಾಗದಲ್ಲಿ ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೇವಲ ಎಕರೆಗೆ 15 ಲಕ್ಷ ರೂಪಾಯಿ ನೀಡಿದರೆ, ಬೇರೆ ಕಡೆ ಫಲವತ್ತಾದ ಭೂಮಿಯೂ ಸಿಗಲ್ಲ. ಆ ಹಣವೂ ಬೇಗ ಖರ್ಚಾಗಿ ಹೋಗಲಿದೆ ಅಂತ ಸೋಲೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಮುಜಾಯಿದ್ ಪಾಷ ಅವರು ಹೇಳಿದ್ದಾರೆ. ರೈತರು ಜಮೀನು ಕಳೆದುಕೊಂಡರೆ ಎಲ್ಲಿಗೆ ಗೂಳೆ ಹೋಗಲು ಸಾಧ್ಯವೇ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ 2ನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ದಿನಕ್ಕೊಂದು ವಿಷಯ ಚರ್ಚೆಯಾಗುವುದು ತಪ್ಪುತ್ತಿಲ್ಲ.


