ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಅವಘಡ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕಳೆದ ವರ್ಷ ಆರು ತಿಂಗಳಲ್ಲಿ (ಏಪ್ರಿಲ್–ಸೆಪ್ಟೆಂಬರ್) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳಿಂದ 118 ಮಂದಿ ಮೃತಪಟ್ಟಿದ್ದಾರೆ.
ಬೆಸ್ಕಾಂ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆಇಆರ್ಸಿ) ವಾರ್ಷಿಕ ದರ ಪರಿಷ್ಕರಣೆ ಪ್ರಸ್ತಾವದ ಭಾಗವಾಗಿ ಸಲ್ಲಿಸಿರುವ ದಾಖಲೆಗಳಲ್ಲಿ ಈ ಅಂಕಿ- ಅಂಶಗಳ ಉಲ್ಲೇಖವಿದೆ.
2015–16 ರಿಂದ 2023–24ರವರೆಗೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ವಿದ್ಯುತ್ ಅಪಘಾತಗಳಲ್ಲಿ ವಾರ್ಷಿಕವಾಗಿ ಸರಾಸರಿ 109 ಜನರು ಮೃತಪಟ್ಟಿದ್ದಾರೆ. 2024ರ ಆರು ತಿಂಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ಈ ಅವಧಿಯಲ್ಲಿ 61 ಪ್ರಾಣಿಗಳೂ ಮೃತಪಟ್ಟಿವೆ. 2024–25ರ ಅಂಕಿ- ಅಂಶಗಳು ಇನ್ನೂ ಬಿಡುಗಡೆಯಾಗಿಲ್ಲ. ಮೂಲಗಳ ಪ್ರಕಾರ, ಈ ವರ್ಷದಲ್ಲಿ ಸಾವಿನ ಸಂಖ್ಯೆ 150 ದಾಟಬಹುದು. ಅವಘಡಗಳಲ್ಲಿ ಸಾರ್ವಜನಿಕರಷ್ಟೇ ಅಲ್ಲದೇ, ಬೆಸ್ಕಾಂ ಸಿಬ್ಬಂದಿಯೂ ಮೃತಪಟ್ಟಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು:
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಅಪಘಾತಗಳು ಹೆಚ್ಚಾಗಿವೆ. ಕೃಷಿ ಜಮೀನಿನಲ್ಲಿ ಹೆಚ್ಚು ಘಟನೆಗಳು ನಡೆದಿರುವುದು ವರದಿಯಾಗಿದೆ. ಇದರಲ್ಲಿ ವಿದ್ಯುತ್ ಹರಿಯುತ್ತಿರುವ ತಂತಿ ಸ್ಪರ್ಶಿಸುವುದು, ಬಿದ್ದ ತಂತಿ ತುಳಿದು ಮೃತಪಟ್ಟಿರುವ ಪ್ರಕರಣಗಳು ಹೆಚ್ಚು.
ಮಂಗಳವಾರವಷ್ಟೇ ತಿಪಟೂರು ತಾಲ್ಲೂಕಿನ ಕಲ್ಲಯ್ಯನಪಾಳ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಎರಡು ಸೀಮೆ ಹಸುಗಳು ಮೃತಪಟ್ಟಿವೆ. ರಾಸುಗಳನ್ನು ಮನೆಯ ಸಮೀಪದ ತೋಟದಲ್ಲಿ ಮೇಯಿಸಲು ಹೋದಾಗ ಇದು ಸಂಭವಿಸಿದೆ. ಚಿಕ್ಕನಾಯಕನಹಳ್ಳಿ ಬಳಿಯ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಕುಶಾಲ್ ಎಂಬ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಪೋಷಕರ ಜತೆಗೆ ಜಮೀನಿಗೆ ಹೋದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ತುಳಿದಾಗ ಈ ಘಟನೆ ಸಂಭವಿಸಿದೆ. ಹಳೆಯ ವಿದ್ಯುತ್ ತಂತಿ ಬದಲಾಯಿಸದ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.
‘ವಿದ್ಯುತ್ ವಾಹಕ ಮಾರ್ಗಗಳ ಬಳಿ ಕಬ್ಬಿಣದ ಸರಳು– ತಗಡುಗಳ ಸ್ಪರ್ಶ, ಪೂರ್ಣ ತಿಳಿವಳಿಕೆಯಿಲ್ಲದೆ ವಿದ್ಯುತ್ ಉಪಕರಣ ಬಳಸುವುದು, ಅನಧಿಕೃತವಾಗಿ ವಿದ್ಯುತ್ ಕೆಲಸಗಳಲ್ಲಿ ತೊಡಗುವುದರಿಂದ ಅವಘಡಗಳು ಸಂಭವಿಸುತ್ತವೆ’ ಎಂದು ಅಧಿಕಾರಿಗಳು ಕಾರಣಗಳನ್ನು ಪಟ್ಟಿ ಮಾಡುತ್ತಾರೆ.
ಮಳೆಗಾಲದಲ್ಲಿ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಕಳೆದ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ಮಧ್ಯೆ ಹೆಚ್ಚಿನ ವಿದ್ಯುತ್ ಅವಘಡಗಳು ಸಂಭವಿಸಿವೆ.
ಕಾರಣಗಳೇನು? :
ಸಾರ್ವಜನಿಕರ ನಿರ್ಲಕ್ಷ್ಯ, ಅನಧಿಕೃತ ವಿದ್ಯುತ್ ಬಳಕೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸೇರಿದಂತೆ ಹಲವು ಕಾರಣಗಳನ್ನು ಇಲಾಖೆಯ ಅಧಿಕಾರಿಗಳು ನೀಡುತ್ತಾರೆ.
‘ಹಳೆ ತಂತಿಗಳು, ಶಿಥಿಲಗೊಂಡ ಕಂಬಗಳು, ಹಾಳಾಗಿರುವ ವಿದ್ಯುತ್ ಪರಿವರ್ತಕಗಳನ್ನು ಸಕಾಲಕ್ಕೆ ಬದಲಿಸದಿರುವುದು, ಬಹು ಮುಖ್ಯವಾಗಿ ವಾರ್ಷಿಕ ನಿರ್ವಹಣೆಯ ಕೊರತೆಯೇ ಕಾರಣ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ರೈತ ಮುಖಂಡ ಲಕ್ಷ್ಮೀನಾರಾಯಣ.
‘ಜಮೀನಿನ ಮೇಲೆ ಹಾದು ಹೋಗಿರುವ ತಂತಿಗಳು ಕೆಳಗೆ ಇಳಿ ಬಿದ್ದಿರುತ್ತವೆ. ಕಂಬಗಳು ಬಾಗಿರುತ್ತವೆ. ಇವುಗಳ ಬಗ್ಗೆ ರೈತರು ಇಲಾಖೆಗೆ ದೂರು ನೀಡಿರುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಿ, ಸರಿಪಡಿಸಿದರೆ ಅವಘಡಗಳನ್ನು ತಪ್ಪಿಸಬಹುದು’ ಎಂದು ಅವರು ಸಲಹೆ ನೀಡುತ್ತಾರೆ
ಅವಘಡಗಳನ್ನು ತಪ್ಪಿಸುವ ಸಂಬಂಧ ಪ್ರತಿ ವರ್ಷ ಬೆಸ್ಕಾಂ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಸರಿಪಡಿಸುವ ಕೆಲಸ ಮಾಡುತ್ತದೆ. 2024ರಲ್ಲಿ ಏಪ್ರಿಲ್–ಸೆಪ್ಟೆಂಬರ್ ತಿಂಗಳ ಮಧ್ಯೆ 39,024 ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಪರಿಹಾರ ಕಾಮಗಾರಿ ಕೈಗೊಂಡಿದೆ. ಆದರೆ, ಇನ್ನೂ 17,463 ಸ್ಥಳಗಳಲ್ಲಿ ಈ ಕೆಲಸ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ ಇಲಾಖೆ ಕೈಗಾರಿಕೆ ವಾಣಿಜ್ಯ ಕ್ಷೇತ್ರಕ್ಕೆ ಕೊಟ್ಟಷ್ಟು ಗಮನವನ್ನು ಗ್ರಾಮೀಣ ಮತ್ತು ಕೃಷಿ ಕ್ಷೇತ್ರಕ್ಕೆ ನೀಡುವುದಿಲ್ಲ. ಈ ಎರಡೂ ಕ್ಷೇತ್ರದಿಂದ ಲಾಭವಿಲ್ಲ ಎಂಬುದು ಇದಕ್ಕೆ ಕಾರಣ. ಈ ನಿರ್ಲಕ್ಷ್ಯದಿಂದಲೇ ಹಳ್ಳಿಗಳಲ್ಲಿ ಹೆಚ್ಚು ವಿದ್ಯುತ್ ಅಪಘಾತ ಸಾವು– ನೋವು ಸಂಭವಿಸುತ್ತಿವೆ. ಜಮೀನುಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದಾಗ ಕಂಬಗಳು ಬಾಗಿದ್ದಾಗ ದೂರು ಕೊಡುತ್ತೇವೆ. ಆದರೆ ತಕ್ಷಣ ಸ್ಪಂದಿಸುವುದಿಲ್ಲ. ನಿರ್ವಹಣೆ ಸಮರ್ಪಕವಾಗಿದ್ದರೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳುತ್ತಾರೆ.
ರೈತರಿಗೆ ಗುಡ್ ನ್ಯೂಸ್: ಮಿನಿ ಟ್ರ್ಯಾಕ್ಟರ್ ಖರೀದಿಗೆ ಶೇ 90% ಸಹಾಯಧನ..! ಅರ್ಜಿ ಸಲ್ಲಿಕೆ ಹೇಗೆ?


