ಬೆಂಗಳೂರು: ವಿದ್ಯುತ್ ಬಳಕೆ ಸಂಬಂಧ ರಿಯಲ್ ಟೈಂನಲ್ಲಿ ವಿದ್ಯುತ್ ಬಳಕೆ ಬಗ್ಗೆ ನಿಖರ ಮಾಹಿತಿ ಒದಗಿಸುವ ಸ್ಮಾರ್ಟ್ ಮೀಟರ್ಗಳಿಗೆ ಭಾರಿ ಮೊತ್ತದ ಹೆಚ್ಚುವರಿ ದರ ನಿಗದಿ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ)ಗೆ ನೋಟಿಸ್ ಜಾರಿಗೊಳಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಮಾರಾಟ, ಅಳವಡಿಕೆ ಹಾಗೂ ನಿರ್ವಹಣೆಗೆ ದಾವಣಗೆರೆ ಮೂಲದ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಿರುವ ಟೆಂಡರ್ ರದ್ದು ಕೋರಿ ಬೆಂಗಳೂರಿನ ಅಶ್ವರಾಮಾನುಜಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಆರ್. ಆನವೇರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. (ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ)
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ಸರಕಾರ, ಬೆಸ್ಕಾಂ ಹಾಗೂ ಟೆಂಡರ್ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿತು. ಆರ್ಜಿದಾರರ ಪರ ವಾದಿಸಿದ ವಕೀಲ ಮಧುಸೂಧನ ಬಿ. ಅಡಿಗ, ‘‘ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ನಿಗದಿತ ದರ 2,461 ರೂ. ಹಾಗೂ ತ್ರೀ ಫೇಸ್ ಸ್ಮಾರ್ಟ್ ಮೀಟರ್ ನಿಗದಿತ ದರ 3,292 ರೂ. ಇದೆ. ಆದರೆ, ಟೆಂಡರ್ನಲ್ಲಿಕ್ರಮವಾಗಿ 4,235 ರೂ. ಹಾಗೂ 7,525 ರೂ. ದರ ನಮೂದಿಸಲಾಗಿದೆ.
ಈ ರೀತಿ ಸಿಂಗಲ್ ಫೇಸ್ ಮೀಟರ್ಗೆ ಜನಸಾಮಾನ್ಯರು 1,774 ರೂ. ಮತ್ತು ತ್ರೀ ಫೇಸ್ ಮೀಟರ್ಗೆ 4,233 ರೂ. ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿದೆ. ಟೆಂಡರ್ ಪ್ರೀಮಿಯಂ ದರ ಶೇ.5ಕ್ಕಿಂತ ಮೀರಬಾರದೆಂದು 2022ರಲ್ಲಿಸಿಎಂ ಕಚೇರಿ ಟಿಪ್ಪಣಿ ಹೊರಡಿಸಿದೆ. ಆದರೆ, ಈಗಿನ ಟೆಂಡರ್ನಲ್ಲಿ ದರ ಶೇ. 72ರಿಂದ ಶೇ.170ರಷ್ಟು ಹೆಚ್ಚಾಗಿದೆ. ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚವಾಗುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಟೆಂಡರ್ ರದ್ದುಪಡಿಸಬೇಕು,’’ ಎಂದು ಕೋರಿದರು.


