ಬೆಂಗಳೂರು: ವಸತಿ, ವಸತಿಯೇತರ ಮತ್ತು ವಾಣಿಜ್ಯ ಕಟ್ಟಡಗಳಿಂದ ಕಸ ವಿಲೇವಾರಿಗೆ ಬಳಕೆದಾರರ ಶುಲ್ಕದ ದರವನ್ನು ಅಂತಿಮಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶನಿವಾರ ಆದೇಶ ಹೊರಡಿಸಿದೆ. ಖಾಲಿ ನಿವೇಶನಗಳಿಗೂ ಘನ ತ್ಯಾಜ್ಯ ವಿಲೇವಾರಿ ಶುಲ್ಕ ವಿಧಿಸಲಾಗಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬಳಕೆದಾರರ ಶುಲ್ಕ ಅನ್ವಯವಾಗಲಿದೆ. 46 ಲಕ್ಷ ಆಸ್ತಿಗಳ ಮಾಲೀಕರು ಘನ ತ್ಯಾಜ್ಯ ವಿಲೇವಾರಿ ಬಳಕೆದಾರರ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮೂಲದಿಂದ ₹ 600 ಕೋಟಿಯಿಂದ ₹ 750 ಕೋಟಿಯಷ್ಟು ವರಮಾನ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.
ಆಸ್ತಿ ತೆರಿಗೆಯ ಭಾಗವಾಗಿಯೇ ಘನ ತ್ಯಾಜ್ಯ ವಿಲೇವಾರಿ ಬಳಕೆದಾರರ ಶುಲ್ಕವನ್ನೂ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಆಸ್ತಿ ತೆರಿಗೆಯ ಪ್ರಮಾಣದಲ್ಲಿ ಶೇಕಡ 30ರಿಂದ ಶೇ 35ರಷ್ಟು ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.
ನಗರದಲ್ಲಿನ ಆಸ್ತಿಗಳ ಮಾಲೀಕರಿಗೆ ಘನ ತ್ಯಾಜ್ಯ ವಿಲೇವಾರಿಗಾಗಿ ಬಳಕೆದಾರರ ಶುಲ್ಕ ವಿಧಿಸುವ ಪ್ರಸ್ತಾವ ದೀರ್ಘ ಕಾಲದಿಂದ ಇತ್ತು. ನಗರಾಭಿವೃದ್ಧಿ ಇಲಾಖೆಯು ಈ ಪ್ರಸ್ತಾವಕ್ಕೆ ಇದೇ ಮಾರ್ಚ್ 4ರಂದು ಒಪ್ಪಿಗೆ ನೀಡಿತ್ತು. ಆ ಬಳಿಕ ವಸತಿ, ವಸತಿಯೇತರ ಕಟ್ಟಡಗಳು, ಹೋಟೆಲ್, ಲಾಡ್ಜ್ಗಳು, ತಾರಾ ಹೋಟೆಲ್ಗಳಿಗೆ ಬಳಕೆದಾರರ ಶುಲ್ಕ ನಿಗದಿ ಕುರಿತು ಚರ್ಚೆ ನಡೆಸಲಾಗಿತ್ತು. ದರ ಪಟ್ಟಿಯನ್ನು ಅನುಮೋದಿಸಿ ಬಿಬಿಎಂಪಿ ಆಡಳಿತಗಾರ ಎಸ್.ಆರ್. ಉಮಾಶಂಕರ ಅವರು ಏಪ್ರಿಲ್ 4ರಂದು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ವಸತಿ ಕಟ್ಟಡಗಳಿಗೆ ಮಾತ್ರ ಶುಲ್ಕದ ದರವನ್ನು ನಿಗದಿಪಡಿಸಲಾಗಿತ್ತು. ಆಗ 600 ಚದರ ಅಡಿ ವಿಸ್ತೀರ್ಣದ ಕಟ್ಟಡಕ್ಕೆ ತಿಂಗಳಿಗೆ ₹ 20 ಮತ್ತು 4,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಕ್ಕೆ ತಿಂಗಳಿಗೆ ₹ 400 ನಿಗದಿಪಡಿಸಲಾಗಿತ್ತು. ಅದನ್ನು ₹ 10 ಮತ್ತು ₹ 400ಕ್ಕೆ ಪರಿಷ್ಕರಿಸಲಾಗಿದೆ.
1,000 ಚದರ ಅಡಿ ವಿಸ್ತೀರ್ಣದ ವಸತಿಯೇತರ ಬಳಕೆಯ ಕಟ್ಟಡದ ಮಾಲೀಕರು ತಿಂಗಳಿಗೆ ₹ 2,000 ಪಾವತಿಸಬೇಕಾಗುತ್ತದೆ. ಇಂತಹ ಕಟ್ಟಡದ ವಿಸ್ತೀರ್ಣ 50,000 ಚದರ ಅಡಿಗಳಿಗಿಂತ ಹೆಚ್ಚಿದ್ದರೆ ತಿಂಗಳ ಶುಲ್ಕ ₹ 35 ಲಕ್ಷ ಇರಲಿದೆ.
1,000 ಚದರ ಅಡಿ ವಿಸ್ತೀರ್ಣದ ಹೋಟೆಲ್ ಮತ್ತು ಲಾಡ್ಜ್ಗಳಿಗೆ ವಾರ್ಷಿಕ ₹ 4,000 ಶುಲ್ಕ ನಿಗದಿಪಡಿಸಲಾಗಿದೆ. ಈ ವರ್ಗದ ಕಟ್ಟಡಗಳ ವಿಸ್ತೀರ್ಣವು 50,000 ಚದರ ಅಡಿಗಿಂತ ಹೆಚ್ಚಾಗಿದ್ದಲ್ಲಿ ವಾರ್ಷಿಕ ₹ 70 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ.
10,000 ಚದರ ಅಡಿ ವಿಸ್ತೀರ್ಣದ ತಾರಾ ಹೋಟೆಲ್ ಉಪಯೋಗದ ಸ್ವತ್ತುಗಳಿಗೆ ವಾರ್ಷಿಕ ₹ 95,000 ಶುಲ್ಕ ನಿಗದಿಪಡಿಸಲಾಗಿದೆ. ಇಂತಹ ಕಟ್ಟಡಗಳ ವಿಸ್ತೀರ್ಣವು 50,000 ಚದರ ಅಡಿಗಳಿಗೂ ಹೆಚ್ಚಿದ್ದರೆ ವಾರ್ಷಿಕ ₹ 87.50 ಲಕ್ಷ ಬಳಕೆದಾರರ ಶುಲ್ಕ ಪಾವತಿಸಬೇಕು.
ಶುಲ್ಕ ಹೆಚ್ಚಳಕ್ಕೆ ಶೇ 60ರ ಮಿತಿ
ಘನ ತ್ಯಾಜ್ಯ ವಿಲೇವಾರಿ ಬಳಕೆದಾರರ ಶುಲ್ಕವು ಸ್ವಂತ ಉಪಯೋಗದ ಸ್ವತ್ತುಗಳು, ಹೋಟೆಲ್, ಲಾಡ್ಜ್ ಮತ್ತು ತಾರಾ ಹೋಟೆಲ್ಗಳ ಉಪಯೋಗದ ಸ್ವತ್ತುಗಳಾಗಿದ್ದಲ್ಲಿ ಅವುಗಳ ಆಸ್ತಿ ತೆರಿಗೆಯ ಮೊತ್ತದ ಶೇಕಡ 60ರಷ್ಟನ್ನು ಮೀರುವಂತಿಲ್ಲ. ಬಾಡಿಗೆಗೆ ನೀಡಿದ ಸ್ವತ್ತುಗಳಿಗೆ ವಿಧಿಸುವ ಬಳಕೆದಾರರ ಶುಲ್ಕವನ್ನು ಆಸ್ತಿ ತೆರಿಗೆಯ ಮೊತ್ತದ ಶೇ 30ಕ್ಕೆ ಮಿತಿಗೊಳಿಸಲಾಗಿದೆ.


