ಬೆಂಗಳೂರು: ಪ್ರಸ್ತುತ 2024-25 ನೇ ಸಾಲಿನ ಆರ್ಥಿಕ ವರ್ಷ ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತಿರುವ ಕಾರಣ ಮಾರ್ಚ್ 30 ಹಾಗೂ 31 ರಂದು ಸರ್ಕಾರಿ ರಜೆ ಇದ್ದರೂ, ಆ ದಿನಗಳಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸಲು ಆದೇಶ ಹೊರಡಿಸಲಾಗಿದೆ.
ಸರ್ಕಾರದ ಅಧಿಸೂಚನೆಯಂತೆ ಏಪ್ರಿಲ್ 1ರಿಂದ ಬಾಕಿ ಆಸ್ತಿ ತೆರಿಗೆ ಮೇಲೆ ದಂಡ ವಿಧಿಸಲಾಗುತ್ತಿದೆ. ತೆರಿಗೆ ಸುಸ್ತಿದಾರರು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಲು ಪಾಲಿಕೆಯ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಟ್ಟಡಗಳಿಂದ ಪಾವತಿಸಬೇಕಾದ ಆಸ್ತಿ ತೆರಿಗೆ ಮತ್ತು ಸೇವಾ ಶುಲ್ಕವನ್ನು ಮಾರ್ಚ್ 31ರ ಒಳಗೆ ಪಾವತಿಸಿದರೆ ಅದರ ಬಡ್ಡಿ ಮೊತ್ತವನ್ನು ಮನ್ನಾ ಮಾಡುವ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಜಾರಿಯಲ್ಲಿದೆ. ಬಾಕಿ ಇರುವ ಆಸ್ತಿ ತೆರಿಗೆ ಹಾಗೂ ಸೇವಾಶುಲ್ಕವನ್ನು ವಸೂಲಾತಿ ಮಾಡಬೇಕಾಗಿದೆ.
ಅದಕ್ಕಾಗಿ ಪಾಲಿಕೆಯ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿ ಉಪವಿಭಾಗ ಮತ್ತು ವಾರ್ಡ್ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಬೇಕು. ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಕ್ರಮ ವಹಿಸಬೇಕು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಅಧಿಕಾರಿ ಮುನೀಶ್ ಮೌದ್ಗಿಲ್ ಹೊರಡಿಸಿರುವ ಕಚೇರಿ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಏ.2ರಿಂದ ಮಳೆ: ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ


