BBMP
Loading ...

BBMP

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ. ಬಿಬಿಎಂಪಿಗೆ ಕಳೆದ 5 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಇದೀಗ ಬಿಬಿಎಂಪಿಯ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಮಾತನಾಡಿದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲಿಯೇ ನಡೆಸಲು ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಕಳೆದ ಐದು ವರ್ಷಗಳಿಂದ ಮಾಡಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಸ್ಥಳೀಯ ಹಂತದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅಲ್ಲದೇ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ಪಾಲಿಕೆಯ ಸದಸ್ಯರು ಇಲ್ಲದೆ ಸಮಸ್ಯೆ ಎದುರಾಗಿದೆ. ಇದೀಗ ಬೆಂಗಳೂರು ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್‌ ಕೊಟ್ಟಿದೆ.

ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಈ ವಿಚಾರವಾಗಿ ವಿರೋಧ ಪಕ್ಷಗಳು ಜಂಟಿ ಸದನ ಸಮಿತಿ ರಚಿಸುವಂತೆ ಮನವಿ ಮಾಡಿದ್ದವು. ಈಗಾಗಲೇ ಅನೇಕರು ಈ ಸಂಬಂಧ ತಮ್ಮ ಸಲಹೆಗಳನ್ನು ಕೊಟ್ಟಿದ್ದಾರೆ. ರಾಜ್ಯಪಾಲರು ಎಷ್ಟು ಬೇಗ ಈ ಮಸೂದೆಗೆ ಸಹಿ ಹಾಕಿ ಕಳುಹಿಸುತ್ತಾರೋ ಅಷ್ಟು ಬೇಗ ಪ್ರದೇಶಗಳನ್ನು ಗುರುತಿಸಿ, ಶಾಸಕರ ಬಳಿ ಮತ್ತೊಮ್ಮೆ ಚರ್ಚೆಮಾಡಿ ಚುನಾವಣೆ ಮಾಡಲಿದ್ದೇವೆ. 73 ಮತ್ತು 74ನೇ ತಿದ್ದುಪಡಿಗೆ ನಮ್ಮ ಸರ್ಕಾರಕ್ಕೆ ಬದ್ಧತೆಯಿದೆ ಎಂದು ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ.

ಬೆಂಗಳೂರು ನಗರದ ಚುನಾಯಿತ ಪ್ರತಿನಿಧಿಗಳು ಬಿಬಿಎಂಪಿ ಬಜೆಟ್ ಬಗ್ಗೆ ಚರ್ಚೆ, ಸಲಹೆ ಸೂಚನೆ ವೇಳೆ ತಮ್ಮ ಕ್ಷೇತ್ರದ ಬೇಡಿಕೆಗಳು, ಸಮಸ್ಯೆಗಳು ಸೇರಿದಂತೆ ಹಲವಾರು ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಬಜೆಟ್ ಮಂಡಿಸಲಾಗುವುದು ಎಂದೂ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ.

ಸರ್ಕಾರದಿಂದ ಬಿಬಿಎಂಪಿಗೆ ದಾಖಲೆಯ ಅನುದಾನ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಗೆ ನೀಡುತ್ತಿರುವ ಅನುದಾನವನ್ನು 4 ಸಾವಿರ ಕೋಟಿ ರೂಪಾಯಿಯಿಂದ ಬರೋಬ್ಬರಿ 7 ಸಾವಿರ ಕೋಟಿಗೆ ಹೆಚ್ಚಳ ಮಾಡಿದೆ. ಎಫ್.ಎ.ಆರ್, ಜಾಹೀರಾತಿನಿಂದ ಪಾಲಿಕೆಗೆ ಆದಾಯ ಬರುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಕೋರ್ಟ್‌ ಜಾಹೀರಾತು ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ಕಾರಣ ಇದರಿಂದ ನಿರೀಕ್ಷಿತ ಆದಾಯ ಕಷ್ಟಸಾಧ್ಯವಾಗಿದೆ ಎಂದು ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ. ಕೋರ್ಟ್‌ ಈ ಹಿಂದೆ ಎರಡು- ಮೂರು ವಿಚಾರದಲ್ಲಿ ಹೀಗೆ ಮಧ್ಯಪ್ರವೇಶ ಮಾಡಿದ ಕಾರಣ ನಾವು ಜಾಗೃತರಾಗಿ ಬಜೆಟ್ ಮಂಡಿಸಬೇಕಾಗುತ್ತದೆ. ಈ ಬಾರಿಯ ರಾಜ್ಯ ಬಜೆಟ್ ಅಲ್ಲಿ ಸಿ.ಎಂ. ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಬೆಂಗಳೂರಿಗೆ ಡಬಲ್ ಡೆಕ್ಕರ್ ಯೋಜನೆ, ಮೆಟ್ರೋ, ಮೇಲ್ಸೇತುವೆ ಹಾಗೂ ಸುರಂಗ ಮಾರ್ಗದ ರಸ್ತೆ ಯೋಜನೆಗೆ ಹಣ ಕೊಡಲಾಗಿದೆ. ಬೆಂಗಳೂರಿಗೆ ಈ ಹಿಂದೆ ಯಾವುದೇ ಸರ್ಕಾರವೂ ಕೊಡದಷ್ಟು ಅನುದಾನವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾಗಿದೆ. ಈಗ ಬೆಂಗಳೂರಿಗೆ ಅತಿಹೆಚ್ಚು ಅನುದಾನ ನೀಡಿದೆ ಎಂದಿದ್ದಾರೆ.

ಬೆಂಗಳೂರು ರಸ್ತೆಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ವತಿಯಿಂದಲೇ 10 ಸಾವಿರ ತಳ್ಳುಗಾಡಿಗಳು: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ

Leave a Reply

Your email address will not be published. Required fields are marked *