ಬೆಂಗಳೂರು: ರಾಜ್ಯದ ವಿಧಾನಸಭೆಯಲ್ಲಿ ಅಧಿವೇಶನದಲ್ಲಿ ಹನಿಟ್ರ್ಯಾಪ್ ಮೇಲಿನ ಚರ್ಚೆ ಬಿರುಗಾಳಿ ಎಬ್ಬಿದೆ. ಸಚಿವರು ಹಾಗೂ ಶಾಸಕರ ಮೇಲೆ ಹನಿಟ್ರ್ಯಾಪ್ಗೆ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪ ಇಂದು ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು. ಇದೇ ವಿಚಾರಕ್ಕೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ಹೈಡ್ರಾಮವೇ ನಡೆಯಿತು.
ತನ್ನ ಮೇಲೆ ಹನಿಟ್ರ್ಯಾಪ್ಗೆ ಪ್ರಯತ್ನ ನಡೆದಿದೆ ಎಂದು ಸಚಿವ ಕೆ.ಎನ್. ರಾಜಣ್ಣ ನೇರವಾಗಿ ಆರೋಪ ಮಾಡಿದ್ದಾರೆ. ಆಡಳಿತ ಪಕ್ಷದ ಅನೇಕ ನಾಯಕರು ಹನಿಟ್ರ್ಯಾಪ್ ಯತ್ನದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇತ್ತ ವಿಪಕ್ಷ ನಾಯಕರು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದು, ಸೂಕ್ತ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ಇಂದು ಕೂಡ ಈ ವಿಷಯದ ಮೇಲೆ ಚರ್ಚೆ ನಡೆಯಿತು. ಹನಿಟ್ರ್ಯಾಪ್ ಪ್ರಕರಣದ ತನಿಖೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಆಗಬೇಕೆಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರು ವಿಧಾನಸಭೆಯ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಸ್ಪೀಕರ್ ಖಾದರ್ ಮೇಲೆ ಪೇಪರ್ ಎಸೆದು ಸಿಟ್ಟು ಹೊರ ಹಾಕಿದರು.
ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹನಿಟ್ರ್ಯಾಪ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ಇಂತಹ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟವರನ್ನು ಸಂಪುಟದಿಂದಲೇ ವಜಾ ಮಾಡಬೇಕು ಮತ್ತು ಸದನ ಗೌರವವನ್ನು ಕಾಪಾಡಬೇಕು ಎಂಬ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ನಾಯಕರು ಆಗ್ರಹಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಯಾರೇ ತಪ್ಪು ಮಾಡಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ಈಗಾಗಲೇ ಗೃಹ ಸಚಿವ ಪರಮೇಶ್ವರ್ ಅವರು ಈ ಬಗ್ಗೆ ಮಾತನಾಡಿದ್ದು, ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಇದೊಂದು ಮಹಾ ಅಪರಾಧ. ಹನಿಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪು ಎಂದು ಸಿದ್ದರಾಮಯ್ಯ ಹೇಳಿದರು.
ಸೂಕ್ತ ತನಿಖೆ ನಡೆಸುವಂತೆ ಸದನದಲ್ಲಿ ಅನೇಕ ನಾಯಕರು ಆಗ್ರಹಿಸಿದರು. ಈ ಎರಡೂ ಪಕ್ಷದವರ ನಡುವೆ ಮಾತಿನ ಚಕಮಕಿ ಕೂಡ ಉಂಟಾಗಿ, ವಿಧಾನಸಭೆಯಲ್ಲಿ ಭಾರಿ ಹೈಡ್ರಾಮವೇ ನಡೆಯಿತು. ಇದೇ ಸಂದರ್ಭದಲ್ಲಿ ವಿಪಕ್ಷ ಸದಸ್ಯದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲದೆ, ಸದನದ ಬಾವಿಗೆ ಇಳಿಗೆ ಸ್ಪೀಕರ್ ಮೇಲೆ ಪೇಪರ್ ಎಸೆದು ಅಸಮಾಧಾನ ಹೊರಹಾಕಿದರು. ಅಲ್ಲದೆ, ವಿಧೇಯಕ ಬಂಡಲ್ಗಳನ್ನೇ ಬಿಜೆಪಿ ಶಾಸಕರು ಎಸೆದಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರು ಸಿಡಿಯನ್ನು ಪ್ರದರ್ಶಿಸಿ ಸಿಡಿ ಮಾಲೀಕ ಯಾರಯ್ಯ ಎಂದು ಘೋಷಣೆ ಕೂಗಿದರು. ಸಿಎಂ ಕುರ್ಚಿಗೋಸ್ಕರ ಹನಿಟ್ರ್ಯಾಪ್ ಮಾಡಿಸುವುದು ಸರಿಯಲ್ಲ ಎನ್ನುತ್ತಾ ಬಿಜೆಪಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಮತ್ತು ಭರತ್ ಶೆಟ್ಟಿ ಸಿಡಿಯನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಅಂದಹಾಗೆ ಇಂದು ವಿಧಾನಸಭೆಯ ಅಧಿವೇಶನದ ಕಡೆಯ ದಿನ. ಹೀಗಾಗಿ ಬೆಳಗ್ಗೆ ವಿಧಾನಸಭೆ ಆರಂಭಗೊಳ್ಳುತ್ತಿದ್ದಂತೆ ಅಶೋಕ್ ಮತ್ತು ಸುನಿಲ್ ಕುಮಾರ್ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸರ್ಕಾರದ ಸಚಿವರೇ ತನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಇನ್ನು ಸಿಎಂ ಸಿದ್ದರಾಮಯ್ಯನವರ ಭಾಷಣದ ಬಳಿಕ ಸರ್ಕಾರ ಹಲವು ಮಸೂದೆಗಳಿಗೆ ಅಂಗೀಕಾರವನ್ನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮಸೂದೆಗಳ ಪ್ರತಿಯನ್ನು ಸ್ಪೀಕರ್ ಮೇಲೆ ಎಸೆದು ಸಿಟ್ಟು ಪ್ರದರ್ಶಿಸಿದರು. ಗದ್ದಲ ಜಾಸ್ತಿ ಆಗುತ್ತಿದ್ದಂತೆ ಖಾದರ್ ಕಲಾಪವನ್ನು 10 ನಿಮಿಷ ಮುಂದಕ್ಕೆ ಹಾಕಿದರು.
ಮಂಡ್ಯದ ಗಂಡು, ಕಾಡಿನ ರಾಜ ಸಿನಿಮಾ ಖ್ಯಾತಿಯ ನಿರ್ದೇಶಕ ಎ.ಟಿ. ರಘು ಇನ್ನಿಲ್ಲ


