ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯದ ಗಂಡು ಸಿನಿಮಾ ಖ್ಯಾತಿಯ ಸ್ಯಾಂಡಲ್ವುಡ್ ನಿರ್ದೇಶಕ, ಬರಹಗಾರ, ನಿರ್ಮಾಪ ಹಾಗೂ ನಟ ಎ.ಟಿ. ರಘು ಗುರುವಾರ ರಾತ್ರಿ (ಮಾರ್ಚ್ 20) ಕೊನೆಯುಸಿರೆಳೆದಿದ್ದಾರೆ.
ರಘು ಅವರಿಗೆ 76 ವರ್ಷ ವಯಸ್ಸಾಗಿತ್ತು. ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೆ, ಡಯಾಲಿಸಿಸ್ ಮಾಡಿಸಿಕೊಳುತ್ತಿದ್ದರು. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ರಘು ವಿಧಿವಶರಾಗಿದ್ದಾರೆ.
ರಘು ಅವರು ಕೊಡಗಿನಲ್ಲಿ ಜನಿಸಿದರು. ಇವರು ಕೊಡವ ಜನಾಂಗದವರಾಗಿದ್ದು, ಆಪಾಡಂಡ ಮನೆತನಕ್ಕೆ ಸೇರಿದವರು. ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಸದ್ಯ ಆರ್.ಟಿ.ನಗರದ ಮಠದಹಳ್ಳಿಯಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದೆ. ಇಂದು (ಮಾರ್ಚ್ 21) ಮಧ್ಯಾಹ್ನ 2 ರಿಂದ 3 ಗಂಟೆಯ ಒಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಿರ್ದೇಶಕರಾಗಿದ್ದ ರಘು, ಸಾಹಸಮಯ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದರು. ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ ಮಂಡ್ಯದ ಗಂಡು ಸೇರಿದಂತೆ 55 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಅಂಬರೀಶ್ ಅವರಿಗೆ 27 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ, ಅನೇಕ ಸಿನಿಮಾಗಳಲ್ಲಿ ರಘು ಸ್ವತಃ ಬಣ್ಣ ಹಚ್ಚಿದ್ದಾರೆ.
ರಘು ನಿರ್ದೇಶನ ಮಾಡಿದ ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಯಶಸ್ಸು ಕಂಡಿವೆ. ಹೀಗಾಗಿ ಇವರನ್ನು ವಿನ್ನಿಂಗ್ ಡೈರೆಕ್ಟರ್ ಎಂದೇ ಕರೆಯುತ್ತಿದ್ದರು. ಅವಳ ನೆರಳು, ಮಂಡ್ಯದ ಗಂಡು, ಅಂತಿಮ ತೀರ್ಪು, ಇನ್ಸ್ಪೆಕ್ಟೆರ್ ಕ್ರಾಂತಿಕುಮಾರ್, ನ್ಯಾಯ ನೀತಿ ಧರ್ಮ, ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಅಗ್ನಿಸಾಕ್ಷಿ, ಕಾಡಿನ ರಾಜ, ಅಜಯ್ ವಿಜಯ್ hAgU ಪುಟ್ಟ ಹೆಂಡ್ತಿ ಸೇರಿದಂತೆ ಸುಮಾರು 55 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಆಸ್ತಿ ನೋಂದಣಿಗೆ ಇ ಖಾತಾ ಕಡ್ಡಾಯ: ಖಾತಾ ಮಾಡಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ


