ಬೆಂಗಳೂರು: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಬೆನ್ನಲ್ಲೇ ಇದೀಗ ಖಾಸಗಿ ಶಾಲೆಯ್ಲೂ ಸಹ ಫೀಸ್ ಬಡ್ಡಿ ದಂಧೆ ಬೆಳಕಿಗೆ ಬಂದಿದೆ. ಶಾಲಾ ಶುಲ್ಕ ಉಳಿಸಿಕೊಂಡಿದ್ದಕ್ಕೆ ಇಂಟ್ರೆಸ್ಟ್ (ಬಡ್ಡಿ) ಹಾಕುವ ಮೂಲಕ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಹೌದು..ಯಲಹಂಕ ಸಿಂಗನಾಯಕನಹಳ್ಳಿಯಲ್ಲಿರುವ ಪ್ರತಿಷ್ಠಿತ ವಿಬ್ ಗಯಾರ್ ಶಾಲೆ ಆಡಳಿತ ಮಂಡಳಿ ಶುಲ್ಕ ವಿಚಾರದಲ್ಲಿ ವಿದ್ಯಾರ್ಥಿಗಳ ಪೋಷಕರ ರಕ್ತ ಹೀರುತ್ತಿದ್ಯಂತೆ. ಮಕ್ಕಳ ಫೀಸ್ ಉಳಿಸಿಕೊಂಡಿದ್ದಕ್ಕೆ ಇಂಟ್ರೆಸ್ಟ್ ಹಾಕುವ ಮೂಲಕ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಎರಡು ಕಂತಿನ ಶಾಲಾ ಫೀಸ್ ಉಳಿಸಿಕೊಂಡಿರುವ ಪೋಷಕರಿಗೆ ಶೇಕಡಾ 3ರಷ್ಟು ಬಡ್ಡಿ ಹಾಕುವ ಮೂಲಕ ಶಾಕ್ ನೀಡಿದ್ದು, ಶಾಲಾ ಫೀಸ್ ಕಟ್ಟದ್ದಕ್ಕೆ ತಿಂಗಳಿಗೆ 3% ಬಡ್ಡಿ ಸಹಿತ ಫೀಸ್ ಕಟ್ಟುವಂತೆ ಶಾಲಾ ಆಡಳಿತ ಮಂಡಳಿ ಇ ಮೇಲ್ ಮಾಡಿದೆ. 25450 ರೂ ಫೀಸ್ ಗೆ 5344 ರೂ ಬಡ್ಡಿ, 25450 ರೂ ಫೀಸ್ ಗೆ 3054 ರೂ ಬಡ್ಡಿ, 25450 ರೂ ಫೀಸ್ ಗೆ 763 ರೂ ಬಡ್ಡಿ ಹಾಕಲಾಗಿದೆ. ಇದು ಪೋಕಷರ ಆಕ್ರೋಕ್ಕೆ ಕಾರಣವಾಗಿದ್ದು, ನಿಯಮವನ್ನು ಗಾಳಿಗೆ ತೂರಿ ಬಡ್ಡಿ ದಂಧೆಗೆ ಇಳಿದ ಶಾಲಾ ಆಡಳಿತ ಮಂಡಳಿ ವಿರುದ್ದ ಪೋಷಕರು ಕಿಡಿಕಾರಿದ್ದಾರೆ.
ಇನ್ನು ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ತಡವಾಗಿದ್ದಕ್ಕೆ ಶೈಕ್ಷಣಿಕ ವರ್ಷದ ಹೋಮ್ ವರ್ಕ್ ಮೆಸೇಜ್ ಗಳನ್ನು ಕೂಡ ಆಡಳಿತ ಮಂಡಳಿ ಬ್ಲಾಕ್ ಮಾಡಿದ್ಯಂತೆ. ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಕ್ಸಾಂ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ಬೆದರಿಕೆ ಹಾಕಿದ್ದು, ಇದಕ್ಕೆ ಪೋಷಕರು ಕೆಂಡಾಮಮಡಲರಾಗಿದ್ದಾರೆ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸದ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪೋಷಕರ ಆರೋಪದ ಬಗ್ಗೆ ಟಿವಿ9 ಶಾಲೆಯ ಆಡಳಿತ ಮಂಡಳಿಯನ್ನು ಪ್ರತಿಕ್ರಿಯೆ ಕೇಳಿದ್ರೆ ಅಡ್ಮಿನ್ ಡಿಪಾರ್ಟ್ಮೆಂಟ್ ನಿಂದ ಇಬ್ಬರು ಅಧಿಕಾರಿಗಳು ಆಗಮಿಸಿ ನಾವು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.
ಅಷ್ಟೇ ಅಲ್ಲ ಮುಂದಿನ ಶೈಕ್ಷಣಿಕ ವರ್ಷದ ಫೀಸ್ ಏಪ್ರಿಲ್ ತಿಂಗಳಲ್ಲಿ ಪಾವತಿಸಬೇಕು. ಆದ್ರೆ ಫೀಸ್ ಫೆಬ್ರವರಿ ತಿಂಗಳಲ್ಲೆ ಕಟ್ಟುವಂತೆ ಪೋಷಕರಿಗೆ ಟಾರ್ಚರ್ ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಶಾಲೆಯ ಟಾರ್ಚರ್ ಪೋಷಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದು, ಶಾಲೆಯಲ್ಲಿ ನಡೆಯುವ ಬಡ್ಡಿ ದಂಧೆಗೆ ಬ್ರೇಕ್ ಬೀಳಬೇಕಿದೆ.
ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಜಾರಿಯಾಯ್ತು ಸುಗ್ರೀವಾಜ್ಞೆ: ಕಿರುಕುಳ ನೀಡಿದ್ರೆ 10 ವರ್ಷ ಜೈಲು ಫಿಕ್ಸ್!


