BBMP
Loading ...

High Court

ಸರ್ಕಾರಿ ಉದ್ಯೋಗಿ ಲಂಚಕ್ಕೆ ಅಪೇಕ್ಷಿಸಿದರೆ ಅಥವಾ ಲಂಚ ಪಡೆದಿರುವುದು ಸಾಬೀತಾದರೆ ಆತನನ್ನು ಸೇವೆಯಿಂದಲೇ ವಜಾಗೊಳಿಸುವುದು ಅಥವಾ ಶಾಶ್ವತವಾಗಿ ತೆಗೆದುಹಾಕುವುದೇ ಸರಿಯಾದ ಶಿಕ್ಷೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

ಅಲ್ಲದೇ ಬ್ಲಾಕ್ ಶಿಕ್ಷಣಾಧಿಕಾರಿಯನ್ನು ಲಂಚ ಪಡೆದ ಆರೋಪದ ಮೇಲೆ ವಜಾಗೊಳಿಸಿದ್ದನ್ನು ಕಡ್ಡಾಯ ನಿವೃತ್ತಿಗೆ ಮಾರ್ಪಡಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಯ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದೆ.

ಕೆಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಹಾಗೂ ಡಿ.ರಾಮಚಂದ್ರ ಹುದ್ದಾರ ಅವರಿದ್ದ ವಿಭಾಗೀಯ ಪೀಠ ಆದೇಶ ನೀಡಿದೆ.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಆದೇಶ ಮಾರ್ಪಡಿಸುವುದಕ್ಕೆ ಸಮರ್ಥನೆ ನೀಡಿಲ್ಲ. ಕಾನೂನಿನ ನೆಲೆಯಲ್ಲಿ ಕ್ರಿಮಿನಲ್ ಪ್ರಕ್ರಿಯೆ ಹಾಗೂ ಇಲಾಖಾ ವಿಚಾರಣೆ ವಿಭಿನ್ನ. ಕ್ರಿಮಿನಲ್ ಮೊಕದ್ದಮೆಗಳಲ್ಲಿ ಕಟ್ಟುನಿಟ್ಟಾಗಿ ಸಾಕ್ಷ್ಯ ಸಂಗ್ರಹ ಮಾಡಬೇಕಿರುವ ಅಗತ್ಯತೆ ಇದೆ. ಆದರೆ, ಇಲಾಖಾ ಪ್ರಕ್ರಿಯೆಗಳಲ್ಲಿ ಪ್ರಾಧಾನ್ಯತೆ ಆಧಾರದ ಮೇಲೆ ಆರೋಪ ಸಾಬೀತುಪಡಿಸಬಹುದಾಗಿದೆ ಎಂದು ವಿವರಿಸಿದೆ.

ಮುಂದುವರಿದು ಅರ್ಜಿದಾರರು ಹೇಳಿರುವಂತೆ ಮೂವರು ಪ್ರತ್ಯಕ್ಷ್ಯದರ್ಶಿಗಳ ಹೇಳಿಕೆಯೂ ಆರೋಪವನ್ನು ಸ್ಪಷ್ಟಪಡಿಸುತ್ತದೆ. ಆದರೆ ದೂರುದಾರರು ಹೇಳಿರುವಂತೆ ಒತ್ತಾಯಪೂರ್ವಕವಾಗಿ ತಮಗೆ ಹಣ ನೀಡಲಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲು ನಿರ್ದಿಷ್ಟ ಪುರಾವೆಗಳಿಲ್ಲ.

ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿರುವಂತೆ ಲಂಚದ ಮೊತ್ತದ ದುಷ್ಕೃತ್ಯ ಸಾಬೀತಾದರೆ, ವಜಾಗೊಳಿಸುವುದು ಅಥವಾ ತೆಗೆದುಹಾಕುವುದು ಮಾತ್ರ ಶಿಕ್ಷೆಯಾಗಿದೆ. ಲಂಚಕ್ಕೆ ಬೇಡಿಕೆ ಮತ್ತು ಸ್ವೀಕರಿಸಿದ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ತೀರ್ಮಾನಕ್ಕೆ ಬರದ ಹೊರತು, ಶಿಸ್ತು ಪ್ರಾಧಿಕಾರವು ವಿಧಿಸಿದ ಶಿಕ್ಷೆ ಮಾರ್ಪಡಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ ಕೆಎಟಿ ಆದೇಶ ಬದಿಗಿರಿಸಿ ಅರ್ಜಿ ಪುರಸ್ಕರಿಸಿ ಆದೇಶಿಸಿದೆ.

ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿ ಲಂಚ ಪಡೆಯುವುದು ಅಕ್ಷಮ್ಯ. ಪ್ರತಿವಾದಿಯೂ ಲಂಚಕ್ಕೆ ಬೇಡಿಕೆಯಿಟ್ಟಿರುವುದು ಹಾಗೂ ಪಡೆದಿರುವುದು ತನಿಖೆ ವೇಳೆ ಸತ್ಯವೆಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಶಿಸ್ತು ಪ್ರಾಧಿಕಾರ ಅವರನ್ನು ಉದ್ಯೋಗದಿಂದ ವಜಾಗೊಳಿಸಿದೆ. ಆದರೆ, ಇದನ್ನು ಪರಿಗಣಿಸದೆ ಕೆಎಟಿ ಆದೇಶವನ್ನು ಕಡ್ಡಾಯ ನಿವೃತ್ತಿಗೆ ಮಾರ್ಪಡಿಸಿರುವುದು ಸುಪ್ರೀಂಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿದೆ. ಹೀಗಾಗಿ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದರು.

ಶಿಸ್ತು ಪ್ರಾಧಿಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷಾೃಧಾರ ಆಧರಿಸಿ ತೀರ್ಪು ನೀಡಿದೆ. ಪ್ರಕರಣ ಸಂಬಂಧ ಮೂವರು ಪ್ರತ್ಯಕ್ಷದರ್ಶಿಗಳು ಸಾಕ್ಷಿ ನುಡಿದಿದ್ದಾರೆ. ಆರೋಪಿಯು 25 ಸಾವಿರ ರೂ. ಲಂಚ ನೀಡುವಂತೆ ಒತ್ತಾಯಿಸಿದ್ದಾರೆ.

ಬಳಿಕ ದೂರುದಾರರಿಂದ 20 ಸಾವಿರ ರೂ. ಪಡೆದುಕೊಂಡು ಕೈಯನ್ನು ಸೋಡಿಯಂ ಕಾರ್ಬೋನೇಟ್ ಬಳಸಿ ತೊಳೆದುಕೊಂಡಿದ್ದಾರೆ. ಇದರಿಂದಾಗಿ ಆತನ ಕೈ ಗುಲಾಬಿ ಣ್ಣಕ್ಕೆ ತಿರುಗಿತ್ತು. ಇದೆಲ್ಲವೂ ಇಲಾಖಾ ವಿಚಾರಣೆ ವೇಳೆ ಸ್ಪಷ್ಟವಾಗಿ ತಿಳಿದಿದೆ. ಈ ಕುರಿತಾಗಿ ಪುರಾವೆಗಳಿವೆ. ಹೀಗಿರುವಾಗ ನ್ಯಾಯಮಂಡಳಿ ತೀರ್ಪು ಮಾರ್ಪಡಿಸಿ ತಪ್ಪೆಸಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ವಿವರಣೆ ನೀಡಿದರು.

ಆರೋಪಿ ಪರ ವಕೀಲರು ವಾದ ಮಂಡಿಸಿ ಪ್ರಕರಣದಲ್ಲಿ ಆರೋಪಿ ತಪ್ಪೆಸಗಿಲ್ಲ. ಒತ್ತಾಯಪೂರ್ವಕವಾಗಿ ಹಣ ನೀಡಲಾಗಿದೆ. ಹಣ ಹಿಂಪಡೆದ ಮಾತ್ರಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗದು, ಹಾಗಾಗಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.

ಪ್ರಕರಣವೇನು?
ಆರೋಪಿ ಎ.ಎಸ್.ಪ್ರಭು ಎಂಬಾತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಶಿಕ್ಷಣ ಇಲಾಖೆಯಡಿ ದ್ವಿತೀಯ ದರ್ಜೆ ಸಹಾಯಕರಾಗಿ (ಬ್ಲಾಕ್ ಶಿಕ್ಷಣಾಧಿಕಾರಿಯಾಗಿ) ಕೆಲಸದಲ್ಲಿದ್ದರು.

2010 ಎ.29ರಂದು ವಿದ್ಯಾರ್ಥಿನಿಯೊಬ್ಬಳು ಪ್ರೀ-ಯೂನಿವರ್ಸಿಟಿ ಅಂಕಪಟ್ಟಿಯಲ್ಲಿ ಲೋಪದೋಷ ಸರಿಪಡಿಸಬೇಕೆಂದು ಕೇಳಿದ್ದಳು. ಆಗ ಆತ 25 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದ. ಆಕೆಯ ತಂದೆ ದೂರು ನೀಡಿದ್ದು, ದೂರಿನ ಅನ್ವಯ ಪ್ರತಿವಾದಿಯು 20 ಸಾವಿರ ಹಣ ಪಡೆಯುವಾಗ ಬಲೆ ಬೀಸಲಾಗಿದೆ.

ತದನಂತರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಲಾಗಿದ್ದು, ಇಲಾಖಾ ವಿಚಾರಣೆ ಪ್ರಾರಂಭಿಸಲಾಯಿತು. ತದನಂತರ ಆರೋಪ ನಿಗದಿಪಡಿಸಿದ್ದು ಶಿಸ್ತು ಪ್ರಾಧಿಕಾರ ಹುದ್ದೆಯಿಂದ ಆರೋಪಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪ್ರತಿವಾದಿ ಮೇಲ್ಮನವಿ ಸಲ್ಲಿಸಿದ್ದು ಕೆಎಟಿ ಕಡ್ಡಾಯ ನಿವೃತ್ತಿಗೆ ಮಾರ್ಪಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಮನೆ ಕಟ್ಟುವುದಕ್ಕೆ ನಿವೇಶನ ಇಲ್ವಾ? ರಾಜ್ಯ ಸರ್ಕಾರದಿಂದ ಸೈಟ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

Leave a Reply

Your email address will not be published. Required fields are marked *