ಬೆಂಗಳೂರು: ನೂತನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹3 ಲಕ್ಷ ಲಂಚ ಪಡೆದ ಬೆಸ್ಕಾಂ ಸಹಾಯಕ ಎಂಜಿನಿಯರ್ (ಎಇ) ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ವಿದ್ಯುತ್ ಕಾಮಗಾರಿ ಗುತ್ತಿಗೆದಾರ ಮಧು ಗೌಡ ಅವರು, ನಗರದ ಬಸವನಗರ ವ್ಯಾಪ್ತಿಯಲ್ಲಿ ನೂತನ ಕಟ್ಟಡವೊಂದರ ವೈರಿಂಗ್ ಕಾಮಗಾರಿ ನಡೆಸುತ್ತಿದ್ದಾರೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವ ಸಂಬಂಧ ಬಸವನಗರದ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು’ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
‘ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಬಂಧಿತ ಕಚೇರಿಯ ಸಹಾಯಕ ಎಂಜಿನಿಯರ್ ಎಲ್.ಯೋಗರಾಜ್ (41) ಅವರು ಮಧು ಅವರಿಂದ ₹3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರ ವಿರುದ್ಧ ಮಧು ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು’ ಎಂದಿದೆ.
‘ಲೋಕಾಯುಕ್ತ ಎಸ್ಪಿ ಕೋನ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ, ಮಧು ಅವರು ಬುಧವಾರ ಬೆಸ್ಕಾಂ ಕಚೇರಿ ಬಳಿ ತೆರಳಿದ್ದರು. ಯೋಗರಾಜ್ ಅವರ ಸೂಚನೆಯಂತೆ, ಬೆಸ್ಕಾಂ ಹೊರಗುತ್ತಿಗೆ ಚಾಲಕ ಮುರಳಿ (42) ಅವರಿಗೆ ₹3 ಲಕ್ಷ ನೀಡಿದ್ದರು. ಇದೇ ವೇಳೆ ದಾಳಿ ನಡೆಸಿ ಮುರಳಿ ಅವರನ್ನು ಬಂಧಿಸಲಾಯಿತು’ ಎಂದು ತಿಳಿಸಿದೆ.
‘ಮುರಳಿ ಅವರು ನೀಡಿದ ಹೇಳಿಕೆಯ ಆಧಾರದಲ್ಲಿ ಯೋಗರಾಜ್ ಅವರನ್ನೂ ಬಂಧಿಸಲಾಯಿತು. ₹3 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.


