BBMP
Loading ...

BBMP High Court

ಬೆಂಗಳೂರು:ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ಸ್ ಮತ್ತು ಬ್ಯಾನರ್‌ ಹಾಕಿರುವವರನ್ನು ಶಿಕ್ಷಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಳಿ ಯಾವುದೇ ಕಾನೂನು ಇಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಪಾಲಿಕೆಯ ಬೈಲಾದಲ್ಲಿ ಯಾವುದೇ ಅವಕಾಶ ಇಲ್ಲ ಎಂದೂ ಹೈಕೋರ್ಟ್‌ ಗರಂ ಆಗಿದೆ. ಈ ವಿಷಯವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಸರ್ಕಾರ ಮತ್ತು ಪಾಲಿಕೆಯನ್ನು ಎಚ್ಚರಿಸಿದೆ.

ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಹೈಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಮತ್ತು 2024ರ ಜುಲೈನಲ್ಲಿ ಸ್ವಯಂಪ್ರೇರಣೆಯಿಂದ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಬೆಂಗಳೂರಿನಲ್ಲಿನ ಅಕ್ರಮ ಫ್ಲೆಕ್ಸ್-ಹೋರ್ಡಿಂಗ್ಸ್ ಮತ್ತು ಬ್ಯಾನರ್‌ಗಳ ಹಾವಳಿಯಿಂದ ನಾಗರಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಆದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅಂತೆಯೇ ಉದ್ದೇಶಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾಹೀರಾತು ಬೈಲಾ-2024ರಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಸುವವರನ್ನು ಶಿಕ್ಷಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ’ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.

ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಅಥವಾ ಬ್ಯಾನರ್‌ ಹಾಕುವುದರಿಂದ ವಾಹನ ದಟ್ಟಣೆ ಉಂಟಾಗುವುದಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸರ್ಕಾರ ಮತ್ತು ಬಿಬಿಎಂಪಿ ಕೂಡಲೇ ಅನಧಿಕೃತವಾಗಿ ಫ್ಲೆಕ್ಸ್,, ಹೋರ್ಡಿಂಗ್ಸ್ ಅಥವಾ ಬ್ಯಾನರ್‌ ಹಾಕುವವರಿಗೆ ದಂಡದ ಪ್ರಮಾಣ ನಿಗದಿ ಮಾಡಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳನ್ನು ಕುರಿತು ಸೂಕ್ತ ಉತ್ತರ ನೀಡಬೇಕು ಎಂದು ಹೈಕೋರ್ಟ್‌ ವಿಚಾರಣೆಯನ್ನು 2025 ರ ಜನವರಿ 16 ಕ್ಕೆ ಮುಂದೂಡಿದೆ.

18 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಜಪ್ತಿ
ಹಗಲಿನಲ್ಲಿ ಬಾಗಿಲು ಹಾಕಿದ್ದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ಹೊತ್ತು ಮನೆಯಬಾಗಲು ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಎಫ್ ನಿವಾಸಿಗಳಾದ ಸಂಜಯ್, ಸಂದೀಪ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಇವರಿಂದ 180 ಗ್ರಾಂ ಚಿನ್ನ, 4.ಕೆ.ಜಿ. 800 ಗ್ರಾಂ ಬೆಳ್ಳಿ ಮತ್ತು ದ್ವಿಚಕ್ರ ವಾಹನ ಸೇರಿ ಒಟ್ಟು 18 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ನಿವಾಸಿಯೊಬ್ಬರು ವೆಲ್ಲೂರಿಗೆ ಪ್ರವಾಸ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಮನೆಯ ಬೀಗ ಮುರಿದು, ಲಾಕರ್‌ನಲ್ಲಿಟ್ಟಿದ್ದ ಚಿನ್ನ, ಬೆಳ್ಳಿ ಹಾಗೂ 15 ಸಾವಿರ ನಗದು ಹಣವನ್ನು ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಸಂಚರಿಸುತ್ತಿದ್ದ ಮೂವರನ್ನು ವಿಚಾರಣೆ ನಡೆಸಿದಾಗ, ಮನೆ ಹಾಗೂ ವಾಹನ ಕಳವು ಮಾಡಿರುವುದನ್ನು ಬಾಯಿ ಬಿಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದಾಗ ಇವರು ನಡೆಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ನಂತರ ಕಳವು ಮಾಡಿದ್ದ ಆಭರಣಗಳನ್ನು ಮಾರಾಟ ಮಾಡಿದ್ದ ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ರೌಡಿ ಶೀಟರ್‌ಗಳಾಗಿದ್ದು, ಇವರ ವಿರುದ್ಧ ಕೆ.ಜಿ.ಎಫ್ ಮತ್ತು ಬಂಗಾರಪೇಟೆ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ತಿಳಿಸಿದ್ದಾರೆ. ಯುವತಿಯರ ಜತೆ ಮೋಜಿನ ಜೀವನ ನಡೆಸುವ ಸಲುವಾಗಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಯುವತಿಯರ ಜತೆ ಬೈಕ್‌ನಲ್ಲಿ ಸುತ್ತಾಡುತ್ತಾ ಹಣವನ್ನು ಖರ್ಚು ಮಾಡುತ್ತಿದ್ದರು. ಯುವತಿಯರೊಂದಿಗೆ ಪ್ರವಾಸಿ ತಾಣಗಳಿಗೆ ತೆರಳಿ ಮಜಾ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ 9, ರಾಮಮೂರ್ತಿ ನಗರ ಪೊಲೀಸ್ ಠಾಣ ವ್ಯಾಪ್ತಿಯ ಒಂದು ಮನೆ ಕಳವು ಹಾಗೂ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದರ್ಶನ್​​ಗೆ ಬಿಗ್​ ರಿಲೀಫ್; ಹೈಕೋರ್ಟ್​ನಿಂದ ಷರತ್ತುಬದ್ಧ ಜಾಮೀನು ಮಂಜೂರು

Leave a Reply

Your email address will not be published. Required fields are marked *