BBMP
Loading ...

BBMP Election

ಕರ್ನಾಟಕದಲ್ಲಿ ಶನಿವಾರವಷ್ಟೇ ಮೂರು ಪ್ರಮುಖ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಈ ಚುನಾವಣೆಯ ಫಲಿತಾಂಶ ತಲೆಕೆಳಗೆ ಮಾಡಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಉಪ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಮುಖ ಚುನಾವಣೆಯ ಚರ್ಚೆ ಶುರುವಾಗುತ್ತಿದೆ.

ಅದೇ ಬಿಬಿಎಂಪಿ ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆ. ಕಳೆದ ನಾಲ್ಕು ವರ್ಷಗಳಿಂದ ಈ ಚುನಾವಣೆಯ ನಿರೀಕ್ಷೆಯಲ್ಲಿ ಬೆಂಗಳೂರಿನ ಜನತೆ ಹಾಗೂ ರಾಜಕೀಯ ನಾಯಕರು ಇದ್ದಾರೆ. ಈ ಚುನಾವಣೆಗೆ ಮೂರ್ಹತ ಕೂಡಿಬರುವ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.

ಕರ್ನಾಟಕದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅದ್ಭುತವಾದ ಯಶಸ್ಸು ಗಳಿಸಿದೆ. ಕರ್ನಾಟಕದಲ್ಲಿ ಕಳೆದ ಮೂರು ತಿಂಗಳಿನಿಂದಲೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಫ್‌ಐಆರ್ ಸಹ ದಾಖಲಾಗಿತ್ತು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಹಳೇ ಹುಬ್ಬಳ್ಳಿಯಲ್ಲಿ ಕೇಸ್‌ ವಾಪಸ್‌ ಪಡೆದಿದ್ದು, ವಕ್ಫ್‌ ಆಸ್ತಿ ವಿವಾದ ಹಾಗೂ ಬಿಪಿಎಲ್‌ ಕಾರ್ಡ್‌ಗಳ ರದ್ದು ವಿಚಾರ ಸೇರಿದಂತೆ ಹಲವು ವಿಷಯಗಳು, ವಿವಾದ ಹಾಗೂ ಆರೋಪಗಳು ಕೇಳಿ ಬಂದಿದ್ದವು. ಇದೆಲ್ಲ ಈ ಉಪ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಅದೆಲ್ಲವೂ ಸುಳ್ಳಾಗಿದೆ.

ಈಗ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆದ್ದಿದೆ. ಈ ಗೆಲುವು ಮುಂದೆ ಬಿಬಿಎಂಪಿ ಚುನಾವಣೆಗೆ ಹೋಗುವುದಕ್ಕೆ ಹಾಗೂ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಫಾಸ್ಟ್‌ ಮಾಡಲಿಕ್ಕೆ ಸಹಕಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಬಿಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆ ನಡೆಸಿ ನಾಲ್ಕು ವರ್ಷಗಳೇ ಕಳೆದಿವೆ. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಲ್ಲಿ ಮೇಯರ್‌, ಉಪ ಮೇಯರ್ ಹಾಗೂ ಪಾಲಿಕೆಯ ಸದಸ್ಯರು ಇಲ್ಲದೆ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ.

ಪಾಲಿಕೆಯಲ್ಲಿ ಅಧಿಕಾರಿಗಳೇ ಆಡಳಿತ ನಡೆಸುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಪಾಲಿಕೆಯ ಸದಸ್ಯರು (ಕೌನ್ಸಿಲರ್‌) ಇಲ್ಲದೆ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ತಿಳಿಯದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತ ಮೇಲೆ ಬಿಬಿಎಂಪಿ ಚುನಾವಣೆ ಸದ್ಯಕ್ಕೆ ನಡೆಯುವುದು ಡೌಟ್‌ ಅಂತಲೇ ಹೇಳಲಾಗಿತ್ತು.

ಇನ್ನು ಪಾಲಿಕೆಯ ಚುನಾವಣೆ ಹಲವು ಕಾರಣಕ್ಕೆ ಮುಂದೂಡಲಾಗುತ್ತಿದೆ. ವಾರ್ಡ್‌ಗಳ ಸಂಖ್ಯೆ, ವಾರ್ಡ್‌ಗಳ ಮರು ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿ ಸೇರಿದಂತೆ ಹಲವು ವಿಷಯಗಳಲ್ಲಿ ಗೊಂದಲ ಹಾಗೂ ಸ್ಪಷ್ಟತೆ ಕೊರತೆಯಿಂದ ಸಮಸ್ಯೆ ಮುಂದುವರಿದಿದೆ. ಪಾಲಿಕೆಯ ಚುನಾವಣೆ ನಡೆಸಬೇಕು ಎಂದು ಈ ಹಿಂದೆ ಕಾಂಗ್ರೆಸ್‌ ಕೌನ್ಸಿಲರ್‌ಗಳು ಕೋರ್ಟ್‌ ಮೆಟ್ಟಿಲೇರಿದ್ದೂ ಇದೆ. ಆದರೆ, ಇದೀಗ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿದ್ದರೂ, ಪಾಲಿಕೆ ಚುನಾವಣೆಯ ಗೊಂದಲಗಳನ್ನು ಬಗೆಹರಿಸುವ ಮನಸ್ಸು ಮಾಡ್ತಿಲ್ಲ.

ಚನ್ನಪಟ್ಟಣ, ಶಿಗ್ಗಾವಿ, ಸಂಡೂರುಗಳಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು ; ಎನ್.ಡಿ.ಎ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ

Leave a Reply

Your email address will not be published. Required fields are marked *