BBMP
Loading ...

BESCOM

ಬೆಂಗಳೂರು: ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ತಂದೆ- ಮಗಳ ಸಾವು ಸಂಭವಿಸಿರುವ ಘಟನೆ ಅತ್ಯಂತ ಭೀಕರವಾಗಿದೆ. ಮೃತರ ಕುಟುಂಬಸ್ಥರಿಗೆ ಪರಿಹಾರ ಪಾವತಿಯಿಂದ ಕರ್ತವ್ಯಲೋಪದ ಆರೋಪವನ್ನು ಮರೆಮಾಚಲು ಸಾಧ್ಯವಿಲ್ಲ. ವಿಚಾರಣೆ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ..- ಬೆಂಗಳೂರಿನಲ್ಲಿ ಸಂಭವಿಸಿದ ವಿದ್ಯುತ್ ಅವಘಡ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ ಪರಿ ಇದು.

ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ತಂದೆ-ಮಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬೆಸ್ಕಾಂನ ಕಿರಿಯ ಇಂಜಿನಿಯರ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ಸಾರಾಸಗಟಾಗಿ ನಿರಾಕರಿಸಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎ್ಐಆರ್ ಮತ್ತು ಈ ಸಂಬಂಧ ವಿಚಾರಣಾ ನ್ಯಾಯಾಲಯ ಹೇಳಿಕೆ ತೆಗೆದುಕೊಂಡ ಕ್ರಮ ಪ್ರಶ್ನಿಸಿ ಕಿರಿಯ ಇಂಜಿನಿಯರ್ ಎಸ್.ಮಹಾಂತೇಶ್ ನಾಗೂರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಸ್ಫೋಟವು ಆಕಸ್ಮಿಕವಾಗಿ ಸಂಭವಿಸಿದೆ. ವಿದ್ಯುತ್ ಪ್ರವರ್ತಕಗಳನ್ನು ನಿರ್ವಹಣೆ ಮಾಡುವ ಕಾರ್ಯ ಗುತ್ತಿಗೆದಾರರ ಜವಾಬ್ದಾರಿ. ಅವರ ಅಸಡ್ಡೆಯಿಂದ ಅವಘಡ ಉಂಟಾಗಿದೆ. ಅರ್ಜಿದಾರರು ಇಲ್ಲಿ ಯಾವುದೇ ರೀತಿಯಲ್ಲೂ ತಪ್ಪೆಸಗಲಿಲ್ಲ. ಘಟನೆಗೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಪ್ರಕರಣ ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಬೆಸ್ಕಾಂನ ಕಿರಿಯ ಇಂಜಿನಿಯರ್ ಆಗಿದ್ದಾರೆ. ಅವರಿಗೆ ನಿಗದಿಪಡಿಸಿರುವ ವ್ಯಾಪ್ತಿಯಲ್ಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಅವರ ಹೊಣೆ. ಆದರೆ, ಇಲ್ಲಿ ಅವರು ಎಡವಿದ್ದಾರೆ. ಮಾತ್ರವಲ್ಲದೆ, ಅವರ ವ್ಯಾಪ್ತಿಯಲ್ಲಿನ ಟ್ರಾನ್ಸ್‌ಫಾರ್ಮರ್‌ಗಳ ಕುರಿತಂತೆ ಸಲ್ಲಿಕೆಯಾಗಿದ್ದ ದೂರುಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಅರ್ಜಿದಾರರು ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದು ಪೀಠಕ್ಕೆ ಮನವರಿಕೆ ಮಾಡಿದರು.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ ಟ್ರಾನ್ಸ್‌ಫಾರ್ಮರ್ ಸಮಸ್ಯೆಗೆ ಸಂಬಂಧಿಸಿದಂತೆ ಹಲವಾರು ದೂರುಗಳು ದಾಖಲಾಗಿವೆ. ಈ ಬಗ್ಗೆ ತನಿಖಾಧಿಕಾರಿಗಳು ಆರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ ಎಂದರು. ಅಲ್ಲದೆ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ನಂತೆ 20 ಲಕ್ಷ ರೂ.ಗಳನ್ನು ಬೆಸ್ಕಾಂ ಈಗಾಗಲೆ ಪಾವತಿ ಮಾಡಿದೆ ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ ಈ ಘಟನೆ ಅತ್ಯಂತ ಭೀಕರವಾಗಿದ್ದು, ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಲಾಗಿದೆ ಎಂಬ ನೆಪ ಹೇಳಿ ಕರ್ತವ್ಯಲೋಪದ ಆರೋಪವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಜತೆಗೆ ಅರ್ಜಿದಾರರು ವಿಚಾರಣೆ ಎದುರಿಸಿ ಆರೋಪದಿಂದ ಮುಕ್ತರಾಗಿ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.

ಕಟ್ಟಡದಲ್ಲಿ ಏನಾಯಿತು?
ಈ ಪ್ರಕರಣದಲ್ಲಿ ಅರ್ಜಿದಾರರು ಮತ್ತು ಇತರ ಆರೋಪಿಗಳ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂಬುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ತಿಳಿದುಬರುತ್ತದೆ. ಹೀಗಿರುವಾಗ ಅರ್ಜಿದಾರರು ತನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಇದು ಹೇಗಾಯಿತು ಎಂದರೆ ಕಟ್ಟಡವನ್ನು ವಿನ್ಯಾಸಗೊಳಿಸಿದ ನಂತರ ವಾಸ್ತುಶಿಲ್ಪಿ ಕಟ್ಟಡದಲ್ಲಿ ಏನಾಯಿತು ಎಂಬುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬಂತಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಏನಿದು ಪ್ರಕರಣ?
ಮೃತ ಶಿವರಾಜ್ (55) ಹಾಗೂ ಅವರ ಮಗಳು ಚೈತನ್ಯ (25) 2022ರ ಮಾ. 3ರಂದು ಮದುವೆಗೆ ಕಲ್ಯಾಣ ಮಂಟಪವೊಂದನ್ನು ಬುಕ್ ಮಾಡಿಕೊಂಡು ದ್ವಿಚಕ್ರವಾಹನದಲ್ಲಿ ಮಂಗನಹಳ್ಳಿಯ ನೈಸ್ ರಸ್ತೆಯ ಬಳಿ ಬರುತ್ತಿದ್ದಾಗ ರಸ್ತೆಬದಿಯ ವಿದ್ಯುತ್ ಕಂಬಗಳಿಗೆ ಅಳವಡಿಸಿದ ಪರಿವರ್ತಕ ಸ್ಫೋಟಗೊಂಡಿತ್ತು. ಗಂಭೀರ ಗಾಯಕ್ಕೊಳಗಾದ ತಂದೆ- ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಸಲಾಗಿತ್ತು. ಆದರೆ ಇಬ್ಬರೂ ಕೂಡ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಈ ಬಗ್ಗೆ ಸಹಕಾರ ಸಚಿವರು ಹಾಗೂ ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್ ಅವರ ಆದೇಶದ ಮೇರೆಗೆ ಜ್ಞಾನಭಾರತಿ ಪೊಲೀಸರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯದ ಅಡಿಯಲ್ಲಿ ಎ್ಐಆರ್ ದಾಖಲಿಸಿದ್ದಾರೆ. ಟ್ರಾನ್ಸ್‌ಫಾರ್ಮರ್‌ನಿಂದ ತೈಲ ಸೋರಿಕೆಯಾಗುತ್ತಿರುವ ಬಗ್ಗೆ ಬೆಸ್ಕಾಂಗೆ ಸ್ಥಳೀಯರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿತ್ತು.

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ
ಮಂಗನಹಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಧ್ಯಾಹ್ನ 12.50ಕ್ಕೆ 112 ಸಹಾಯವಾಣಿಗೆ ಕರೆ ಬಂದಿದೆ. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ ಘಟನೆಯನ್ನು ತಡೆಯಬಹುದಿತ್ತು. ಅವರ ನಿರ್ಲಕ್ಷ್ಯವೇ ಸಾವಿಗೆ ನೇರ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

KSLECA ರಾಜ್ಯಾಧ್ಯಕ್ಷ ರಮೇಶ್ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾ ಸಮಿತಿಯಿಂದ ನ.23ರಂದು ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜನೆ

Leave a Reply

Your email address will not be published. Required fields are marked *